ವರ್ತಕರಿಂದ ರೈತರಿಗೆ ಆಗುತ್ತಿರುವ ಮೋಸ ನಿಲ್ಲಲಿ

| Published : Sep 25 2024, 12:56 AM IST

ಸಾರಾಂಶ

ಯಲಬುರ್ಗಾ-ಕುಕನೂರು ಅವಳಿ ತಾಲೂಕಿನ ವರ್ತಕರು ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ

ಕನ್ನಡಪ್ರಭ ವಾರ್ತೆ ಕುಕನೂರು

ಯಲಬುರ್ಗಾ-ಕುಕನೂರು ಅವಳಿ ತಾಲೂಕಿನ ವರ್ತಕರು ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಈ ವೇಳೆ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ಮಾತನಾಡಿ, ರಾಜ್ಯದ ರೈತರು ಒಂದಿಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರಿಗೆ ಬೆನ್ನುಲುಬಾಗಿ ನಿಲ್ಲಬೇಕಾದ ವರ್ತಕರು ಇಂದು ತೂಕದಲ್ಲಿ, ಚೀಲದಲ್ಲಿ ಹಾಗೂ ಬೆಲೆಯಲ್ಲಿ ಮೋಸ ಮಾಡುತ್ತಿದ್ದು, ಇದರಿಂದ ರೈತ ವರ್ಗ ಆತಂಕದಲ್ಲಿ ಬದುಕಬೇಕಾಗಿದೆ. ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳ ಸಾಲಮನ್ನಾ ಮಾಡುತ್ತದೆ. ಆದರೆ ದೇಶದ ರೈತರು ಮಾಡಿರುವ ಸಾಲಮನ್ನಾ ಮಾಡುತ್ತಿಲ್ಲ. ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿವೆ. ವರ್ತಕರು ತಮ್ಮ ಹಳೆಯ ಚಾಳಿ ಮುಂದುವರೆಸಿದರೆ ಕುಕನೂರು ಬಂದ್‌ಗೆ ಎಲ್ಲ ರೈತರು ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ, ವರ್ತಕರು ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯ ಮಾಡಬೇಕು. ಪ್ಲಾಸ್ಟಿಕ್ ಚೀಲ ಬಿಟ್ಟು ಕಾಟನ್ ಚೀಲದಲ್ಲಿ ತೂಕ ಮಾಡಬೇಕು. ವರ್ತಕರು ಹೊರಗಡೆ ವ್ಯಾಪಾರ ಬಂದ್ ಮಾಡಬೇಕು. ರೈತರಿಂದ ಹಮಾಲರು ಒತ್ತಡ ಹಾಕಿ ಯಾವುದೇ ಧಾನ್ಯ ತುಂಬಬಾರದು. ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯ ಮಾಡದಿದ್ದರೆ ಅಂತ ವರ್ತಕರ ಲೈಸನ್ಸ್ ರದ್ದು ಮಾಡಬೇಕು. ರೈತ ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪಟ್ಟಣದ ಕೋಳಿಪೇಟೆಯಿಂದ ಆರಂಭವಾದ ಮೆರವಣಿಗೆ, ತೇರಿನಗಡ್ಡಿ ಮುಖಾಂತರ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ವೀರಭದ್ರಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ಪ್ರತಿಭಟನೆ ನಡೆಸಿದ ಪರಿಣಾಮ ಟ್ರಾಫಿಕ್ ಜಾಮ್ ಕಂಡು ಬಂತು. ನಂತರ ಎಪಿಎಂಸಿಯ ಗೇಟ್ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರೆಯಿತು.

ತಾಲೂಕು ಅಧ್ಯಕ್ಷ ಮಂಜುನಾಥ ಚೆಟ್ಟಿ, ನಗರ ಘಟಕದ ಅಧ್ಯಕ್ಷ ಗವಿಸಿದ್ದಪ್ಪ ಜೀನಿನ, ಮುಖಂಡರಾದ ಭರಮಪ್ಪ ತಳವಾರ, ದೇವಪ್ಪ ಸೋಬಾನದ್, ಬಸವರಾಜ ಸಬರದ, ಶಿವಪ್ಪ ಸಂದಿಮನಿ, ಹನುಮಂತಪ್ಪ ಮರಡಿ, ಹನುಮಂತಪ್ಪ ಪಲ್ಲೆದ್, ಬಸಪ್ಪ ಮಂಡಲಗೇರಿ, ವೀರಯ್ಯ ಕಳ್ಳಿಮಠ, ಶರಣಯ್ಯ ಕೋಮಾರ, ಕಳಕಪ್ಪ ಕ್ಯಾದಗುಂಪಿ, ರಾಮಣ್ಣ ಯಡ್ಡೋಣಿ, ಕಾಶೀಮಅಲಿ ಸಂಗಟಿ, ಸಾವಿತ್ರಮ್ಮ, ವಜೀರ್‌ಸಾಬ ತಳಕಲ್ ನೂರಾರು ರೈತರು ಇದ್ದರು.