ಮತಾಂತರ ತಡೆಗೆ ಜೀವದ ಹಂಗು ತೊರೆದು ನಿಲ್ಲಿ : ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ

| N/A | Published : Apr 07 2025, 12:31 AM IST / Updated: Apr 07 2025, 01:05 PM IST

ಮತಾಂತರ ತಡೆಗೆ ಜೀವದ ಹಂಗು ತೊರೆದು ನಿಲ್ಲಿ : ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನ, ಮಠ-ಮಂದಿರಗಳ ಹುಂಡಿಗೆ ಹಣ ಹಾಕುವುದಕ್ಕಿಂತ ಬಹುಮುಖ್ಯವಾಗಿ ಹಿಂದೂ ಧರ್ಮ ರಕ್ಷಣೆ, ಹಿಂದೂ ಹೆಣ್ಣುಮಕ್ಕಳ ರಕ್ಷಣೆ, ಹಿಂದೂ ಧರ್ಮದವರ ರಕ್ಷಣೆಗಾಗಿ ಮತಾಂತರವನ್ನು ತಡೆಗಟ್ಟಲು ಜೀವದ ಹಂಗು ತೊರೆದು ನಿಲ್ಲುವ ಸಂಘಟನೆಗಳಿಗೆ ಬೆಂಬಲ ನೀಡಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.

ದಾಂಡೇಲಿ: ದೇವಸ್ಥಾನ, ಮಠ-ಮಂದಿರಗಳ ಹುಂಡಿಗೆ ಹಣ ಹಾಕುವುದಕ್ಕಿಂತ ಬಹುಮುಖ್ಯವಾಗಿ ಹಿಂದೂ ಧರ್ಮ ರಕ್ಷಣೆ, ಹಿಂದೂ ಹೆಣ್ಣುಮಕ್ಕಳ ರಕ್ಷಣೆ, ಹಿಂದೂ ಧರ್ಮದವರ ರಕ್ಷಣೆಗಾಗಿ ಮತಾಂತರವನ್ನು ತಡೆಗಟ್ಟಲು ಜೀವದ ಹಂಗು ತೊರೆದು ನಿಲ್ಲುವ ಸಂಘಟನೆಗಳಿಗೆ ಬೆಂಬಲ ನೀಡಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.

ಅವರು ಶನಿವಾರ ಸಂಜೆ ದಾಂಡೇಲಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಡಿ ನಡೆದ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.

ಹಿಂದೂಗಳು ಶೌರ್ಯ ಮತ್ತು ಧೈರ್ಯವನ್ನು ಮೈಗೂಡಿಸಿಕೊಳ್ಳುವ ಮೂಲಕ ಸದೃಢ ಹಿಂದೂ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ದೀಪಾವಳಿಯಲ್ಲಿ ಆಯುಧ ಪೂಜೆ ಮಾಡುವಾಗ ನಿಜವಾದ ಆಯುಧಗಳಿಗೆ ಪೂಜೆ ಮಾಡುತ್ತಿಲ್ಲ. ತಲವಾರ, ಕತ್ತಿ, ಜಾಕು, ಕೊಡ್ಲಿ ಇನ್ನಿತರ ಆಯುಧಗಳನ್ನು ಪೂಜಿಸಬೇಕು. ಆ ಧೈರ್ಯ ನಮಗಿಲ್ಲ. ಆಯುಧ ಪೂಜೆಯ ದಿನದಂದು ಪೊಲೀಸ್‌ ಠಾಣೆಗಳಲ್ಲಿ ಬಂದೂಕುಗಳಿಗೆ ಪೂಜೆ ಮಾಡುವ ರೀತಿ ಮನೆಗಳಲ್ಲಿ ಧೈರ್ಯದಿಂದ ಆಯುಧ ಪೂಜೆ ಮಾಡಬೇಕು. ಇಂತಹ ಆಯುಧಗಳು ಪೂಜೆಗಾಗಿ ಹೊರತು ಕುಕೃತ್ಯಗಳಿಗಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗೋ ಮಾತೆಯನ್ನು ಕೊಲ್ಲುವ ಕಟುಕರ, ಗೋ ಮಾಂಸ ಭಕ್ಷಿಸುವವರಿಂದ ನಮ್ಮ ದೇವಸ್ಥಾನಕ್ಕೆ ಹೂ ತಗೆದುಕೊಂಡು ಹೋಗುವುದು ನಿಲ್ಲಬೇಕು. ಅಂತವರ ಕಡೆಯಿಂದ ಹೂವನ್ನು ದೇವಸ್ಥಾನಕ್ಕೆ ತಗೆದುಕೊಂಡು ಹೋಗಿ ಅರ್ಪಿಸಿದರೆ ದೇವರು ವರ ಕೊಡುವುದಿಲ್ಲ. ಮನೆಗಳ ಆವರಣದಲ್ಲಿ ನೆಟ್ಟಿರುವ ಗಿಡಗಳ ಹೂವನ್ನೇ ದೇವರಿಗೆ ಅರ್ಪಿಸಬೇಕು ಎಂದರು.

ಗಣೇಶೋತ್ಸವ, ಇನ್ನಿತರ ಹಬ್ಬ ಹರಿದಿನ ಆಚರಣೆ, ಮೆರವಣಿಗೆಯಲ್ಲಿ ಯುವಕರು ಕುಡಿದು ಭಾಗವಹಿಸುವುದು ಸರಿಯಲ್ಲ. ಮಹಿಳೆಯರು, ಸಹೋದರಿಯರು ಮದ್ಯ ಮಾರಾಟದ ವಿರುದ್ಧ ಪ್ರತಿಭಟಿಸಬೇಕು. ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.

ನನ್ನ ಮೇಲೆ 117  ಪ್ರಕರಣ, 25 ಜಿಲ್ಲೆಗಳಿಂದ ಗಡಿಪಾರು ಆದೇಶ ಇದ್ದರೂ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ಮತಾಂತರ, ಭಯೋತ್ಪಾದನೆ ವಿರುದ್ಧ ಜೈಲಿಗೆ ಹೋಗಲು ಸಿದ್ಧವಾಗಬೇಕು. ದೇಶದ ಕಿರೀಟಪ್ರಾಯ ಕಾಶ್ಮೀರವನ್ನು ರಾಜಕೀಯ ನಾಯಕರ ಮೂರ್ಖತನದಿಂದ ನಾವು ಕಳೆದುಕೊಂಡಿದ್ದೇವೆ. ಹಿಂದೂಗಳ ಎಲ್ಲ ದೇವಸ್ಥಾನಗಳನ್ನು ಮರಳಿ ಕಟ್ಟುತ್ತೇವೆ ಎಂದರು.

ಇದಕ್ಕೂ ಮೊದಲು ಹಳೆ ನಗರಸಭೆ ಮೈದಾನದಿಂದ ಭವ್ಯ ಶೋಭಾಯಾತ್ರೆ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಯಲ್ಲಿ ಹಳೆನಗರಸಭೆಯ ಮೈದಾನದಲ್ಲಿ ಸಂಪನ್ನಗೊಂಡಿತು. ವೇದಿಕೆಯಲ್ಲಿ ವಿವಿಧ ಹಿಂದೂ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು.

ಹಿಂದೂ ಸಮಜೋತ್ಸವ ಸಮಿತಿಯಿಂದ ಪ್ರಮೋದ್‌ ಮುತಾಲಿಕ ಅವರನ್ನು ಸನ್ಮಾನಿಸಲಾಯಿತು. ಕಾವ್ಯ ಪ್ರರ್ಥನೆ ಗೀತೆ ಹಾಡಿದರು. ಸಂತೋಷ ಸೋಮನಾಚೆ ಸ್ವಾಗತಿಸಿ, ಪರಿಚಯಿಸಿದರು. ಹಿಂದೂ ಸಮಜೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಪ್ರಭು ಪ್ರಾಸ್ತಾವಿಕ ನುಡಿ ಆಡಿದರು. ದಿಗಂಬರ ನಾಯ್ಕ ವಂದಿಸಿದರು. ವೀಣಾ ಕ್ಷೀರಸಾಗರ ಕಾರ್ಯಕ್ರಮ ನಿರೂಪಿಸಿದರು.