ಸಾರಾಂಶ
ಹುಬ್ಬಳ್ಳಿ:
ಅಪರಾಧ ಕೃತ್ಯ ಬಿಟ್ಟು ಬಿಡಬೇಕು. ಸುಧಾರಿಸಿಕೊಳ್ಳಿ. ಇಲ್ಲವೇ ಗಡೀಪಾರು ಮಾಡಬೇಕಾಗುತ್ತದೆ..!ಇದು ಸ್ವತ್ತಿನ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ 930 ಆರೋಪಿಗಳನ್ನು ಇಲ್ಲಿನ ಹಳೇ ಸಿಎಆರ್ ಮೈದಾನಕ್ಕೆ ಕರೆಯಿಸಿ ಪರೇಡ್ ಮಾಡಿಸಿದ ಪೊಲೀಸ್ ಕಮಿಷನರೇಟ್ ನೀಡಿರುವ ಎಚ್ಚರಿಕೆಯ ಸಂದೇಶವಿದು. ಈ ಮೂಲಕ ಹಳೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಚಳಿ ಬಿಡಿಸಿದರು.
ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸ್ವತ್ತಿನ ಅಪರಾಧ ಪ್ರಕರಣ, ಎಂಒಬಿ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಮೊಬೈಲ್, ಕೆಲಸ, ವಾಹನಗಳ ಪರಿಶೀಲನೆ ಮಾಡಬೇಕಿತ್ತು. ಕೆಲವರು ನಗರದ ಹೊರಗಿದ್ದಾರೆ. ಇನ್ನು ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪೈಕಿ 930 ಆರೋಪಿಗಳು ಪರೇಡ್‌ಗೆ ಬಂದಿದ್ದಾರೆ. ಪೊಲೀಸ್ ಸಿಬ್ಬಂದಿಗಳಿಗೆ ಆರೋಪಿಗಳ ಮುಖ ಪರಿಚಯವಿರಲಿ ಎಂಬ ಕಾರಣಕ್ಕಾಗಿ ಈ ಪರೇಡ್ ಮಾಡಲಾಗಿದೆ. ಈಚೆಗೆ 45 ಆರೋಪಿಗಳನ್ನು ಗಡೀಪಾರು ಮಾಡಲಾಗಿದೆ. ಇನ್ನೂ ಮೂರು ಜನ ಉಳಿದುಕೊಂಡಿರುವ ಮಾಹಿತಿ ದೊರೆತಿದ್ದು, ಅವರನ್ನೂ ಪತ್ತೆ ಹಚ್ಚಿ ಗಡೀಪಾರು ಮಾಡಲಾಗುವುದು ಎಂದರು.ಪದೇ ಪದೇ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುವವರ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಿದೆ. ಅವರು ಸುಧಾರಿಸಿಕೊಂಡರೆ ಒಳ್ಳೆಯದು, ಇಲ್ಲವಾದಲ್ಲಿ ಅಂಥವರನ್ನು ಗಡೀಪಾರು ಮಾಡಲಾಗುವುದು. ಹತ್ತಾರು ವರ್ಷಗಳ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನಂತರ ಪಶ್ಚಾತ್ತಾಪದಿಂದ ಸದ್ಯ ಸುಧಾರಿತ ಜೀವನ ನಡೆಸುತ್ತಿರುವವರೂ ಇದ್ದಾರೆ. ಅಂತಹ ಪ್ರಕರಣಗಳನ್ನು ಠಾಣಾ ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಅವರಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ಇಂದಿನ ಪರೇಡ್‌ನಲ್ಲಿ ಹಸು ಕಳವು, ಮೊಬೈಲ್, ಮನೆ, ಬೈಕ್-ಆಟೋ ಕಳ್ಳತನ ಹಾಗೂ ಮಸಾಲೆ ಪದಾರ್ಥಗಳನ್ನು ಕಳವು ಮಾಡಿದವರನ್ನು ಕರೆಯಿಸಿ ತಾಕೀತು ಮಾಡಲಾಗಿದೆ. ಕೆಲವರ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಬೇರೆ ಬೇರೆ ಹೆಸರು ನೀಡಿದ್ದಾರೆ. ಹೀಗಾಗಿ ಬೆರಳಚ್ಚಿನ ಸಹಾಯದಿಂದ ಅವರನ್ನು ಗುರುತಿಸಿ ರೌಡಿಶೀಟರ್ ತೆರೆದು ಗಡೀಪಾರಿಗೆ ಆದೇಶಿಸಲಾಗುವುದು ಎಂದರು.ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಎಸಿಪಿಗಳಾದ ಶಿವಪ್ರಕಾಶ ನಾಯಕ್, ಪಿಐಗಳು ಪಾಲ್ಗೊಂಡಿದ್ದರು.
ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯನವನಗರದ ಎಪಿಎಂಸಿ ಆವರಣದಲ್ಲಿರುವ ಕೆನರಾ ಬ್ಯಾಂಕ್ ಕಳ್ಳತನಕ್ಕೆ ಸೋಮವಾರ ವಿಫಲ ಯತ್ನ ನಡೆದಿತ್ತು. ನಾವು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಯ ಎದ್ದು ಕಂಡಿತ್ತು. ಪ್ರಕರಣ ಬೆಳಕಿಗೆ ಬಂದ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡದೇ, ಕಳ್ಳತನಕ್ಕೆ ಕತ್ತರಿಸಲಾದ ಶೆಟರ್ಸ್ಅನ್ನು ವೆಲ್ಡಿಂಗ್ ಮಾಡಿಸಿಕೊಂಡಿದ್ದರು. ಇದರಿಂದ ಅಲ್ಲಿ ಸಿಗಬಹುದಾಗಿದ್ದ ಸಾಕ್ಷ್ಯಗಳೂ ನಾಶವಾಗಿವೆ. ಇದೇ ಬ್ಯಾಂಕ್‌ನಲ್ಲಿ ಈ ಹಿಂದಿಯೂ ಕಳ್ಳತನಕ್ಕೆ ಯತ್ನ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಬ್ಯಾಂಕ್ ಕಟ್ಟಡವನ್ನು ಬೇರೆಡೆ ಸ್ಥಳಾಂತರಿಸುತ್ತಿರುವುದರಿಂದ ಅಲ್ಲಿ ಯಾವುದೇ ಸಿಸಿ ಕ್ಯಾಮೆರಾ ಲಭ್ಯವಾಗಿಲ್ಲ. ಬ್ಯಾಂಕ್ ಅಧಿಕಾರಿಗಳು ಸೋಮವಾರ ಸಂಜೆ ತಡವಾಗಿ ದೂರು ನೀಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.ಓರ್ವ ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ನವನಗರದ ವಿಜಯಕುಮಾರ ಅಪ್ಪಾಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವನಗರ ಠಾಣೆಯ ಪೊಲೀಸ್ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ದೂರು ನೀಡಿದ್ದರು. ಠಾಣೆಯ ಕೆಲ ಸಿಬ್ಬಂದಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಿಂಸೆ ಕೊಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಡಿಸಿಪಿ ಅವರಿಂದ ವಿಚಾರಣೆ ನಡೆಸಲಾಗಿದೆ. ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಸಬ್ ಇನ್‌ಸ್ಪೆಕ್ಟರ್ ಓರ್ವರನ್ನು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣಾ ಹಂತದಲ್ಲಿ ಅವರನ್ನು ಪೊಲೀಸ್ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಲಾಗಿದೆ ಎಂದು ಎನ್. ಶಶಿಕುಮಾರ್ ಮಾಹಿತಿ ನೀಡಿದರು.