ಜಿಂದಾಲ್‌ ಕಾರ್ಖಾನೆಗೆ ನೀರು ಹರಿಸುವುದನ್ನು ನಿಲ್ಲಿಸಿ

| Published : Mar 23 2024, 01:08 AM IST

ಜಿಂದಾಲ್‌ ಕಾರ್ಖಾನೆಗೆ ನೀರು ಹರಿಸುವುದನ್ನು ನಿಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಬರಗಾಲ ಬಂದು ಕುಡಿಯಲು ನೀರಿಲ್ಲದಿದ್ದರೂ ತುಂಗಭದ್ರಾ ಜಲಾಶಯದಿಂದ ಜಿಂದಾಲ್ ಕಾರ್ಖಾನೆಗೆ ಪ್ರತಿದಿನ ಏಳು ಎಂಜಿಡಿ ನೀರನ್ನು ನಿರಂತರವಾಗಿ ಹರಿಸುತ್ತಿರುವುದು ಖಂಡನೀಯ.

ಹೊಸಪೇಟೆ:

ತುಂಗಭದ್ರಾ ಜಲಾಶಯದಿಂದ ಜಿಂದಾಲ್ ಕಾರ್ಖಾನೆಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ರೈತಪರ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ತಲೆ ಮೇಲೆ ಬಿಂದಿಗೆ ಹೊತ್ತು, ಕುಡಿಯಲು ನೀರು ಕೊಡಿ, ಜಿಂದಾಲ್‌ಗೆ ನೀರು ಬಿಡಬೇಡಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.ತೀವ್ರ ಬರಗಾಲ ಬಂದು ಕುಡಿಯಲು ನೀರಿಲ್ಲದಿದ್ದರೂ ತುಂಗಭದ್ರಾ ಜಲಾಶಯದಿಂದ ಜಿಂದಾಲ್ ಕಾರ್ಖಾನೆಗೆ ಪ್ರತಿದಿನ ಏಳು ಎಂಜಿಡಿ ನೀರನ್ನು ನಿರಂತರವಾಗಿ ಹರಿಸುತ್ತಿರುವುದು ಖಂಡನೀಯ. ಇಲ್ಲಿನ ಸ್ಥಿತಿಗತಿ ತಿಳಿಯದೇ, ಒಳಹರಿವಿನ ಪ್ರಮಾಣ ಸಂಪೂರ್ಣ ನಿಂತು ಹೋಗಿದೆ. ಬಿಸಿಲಿನ ತಾಪಮಾನಕ್ಕೆ ಈಗಾಗಲೇ ನೀರು ಆವಿಯಾಗುತ್ತಿದೆ. ಇದೆಲ್ಲವೂ ಗಮನಕ್ಕೆ ಇದ್ದರೂ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ನಿತ್ಯವೂ ಜನ, ಜಾನುವಾರುಗಳಿಗೆ ತೀವ್ರ ತೊಂದರೆ ಆಗುತ್ತಿದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ ನೀರು ಹರಿಸಲಾಗುತ್ತಿದೆ ಎಂದು ದೂರಿದರು.ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಮತ್ತು ನಾಲ್ಕು ಜಿಲ್ಲೆಗಳ ಜನರು ಅಧಿಕಾರಿಗಳ ನಡೆ ಖಂಡಿಸುತ್ತಿದ್ದು, ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಒಟ್ಟುಗೂಡಿ ಬೃಹತ್ ಮಟ್ಟದ ಹೋರಾಟ ಮಾಡಬೇಕಾಗುತ್ತದೆ. ಹಾಗಾಗಿ ಇಲ್ಲಿನ ವಾಸ್ತವತೆ ತಿಳಿಸಿ ಜನ, ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಪಿ. ವೆಂಕಟೇಶ ಮಾತನಾಡಿ, ಬೇಸಿಗೆ ಆರಂಭದಿಂದಲೇ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೂ ಜಿಂದಾಲ್‌ಗೆ ಅಕ್ರಮವಾಗಿ ನೀರು ಹರಿಸುತ್ತಿರುವುದು ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸುತ್ತದೆ. ಬೆಂಗಳೂರಿನಂತೆ ಇಲ್ಲಿಯೂ ನೀರು ಖರೀದಿಸುವ ದುಸ್ಥಿತಿ ಬಂದೊದಗಬಹುದು. ಕೂಡಲೇ ಜಿಂದಾಲ್‌ಗೆ ಹರಿಸುತ್ತಿರುವ ನೀರು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ರೈತಪರ ಸಂಘಟನೆಗಳ ಮುಖಂಡರಾದ ಗೋಣಿಬಸಪ್ಪ, ಗಂಟೆ ಸೋಮಶೇಖರ್, ಗೋಸಲ ಭರಮಪ್ಪ, ಅಂಜಿನಪ್ಪ, ಬಿ. ರಂಗಪ್ಪ, ಕನ್ನಡಪರ ಸಂಘಟನೆಗಳ ಮುಖಂಡರಾದ ಗುಜ್ಜಲ ಗಣೇಶ, ಬಸವರಾಜ, ಕಾಸಟ್ಟಿ ಉಮಾಪತಿ, ಗುಂಡಿ ರಮೇಶ, ಗಾಳೆಪ್ಪ, ಜಿ.ಕೆ. ವೆಂಕಟೇಶ, ಯಮುನೇಶ, ಗುಜ್ಜಲ ಮಾರುತಿ, ರಘು, ಉಮೇಶ, ದಮ್ಮೂರು ಮಹೇಶ್‌, ತಂಬ್ರಳ್ಳಿ ರವಿ, ಖಲಂದರ್‌ ಮತ್ತಿತರರಿದ್ದರು.