ಸಾರಾಂಶ
ಧಾರವಾಡ:
ಮಾದಕ ವಸ್ತುಗಳ ಕುರಿತು ಯುವಜನತೆ ಎಚ್ಚರಿಕೆ ವಹಿಸಬೇಕು ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.ಇಲ್ಲಿಯ ಜೆಎಸ್ಸೆಸ್ ಉತ್ಸವ ಸಭಾಭವನದಲ್ಲಿ ಶುಕ್ರವಾರ ಮಾದಕ ವಸ್ತುಗಳ ನಿಯಂತ್ರಣ ಕುರಿತು ನಗರದ ವಿವಿಧ ಕಾಲೇಜುಗಳು, ಹಾಸ್ಟೆಲ್ ಪಾಲಕರು, ವಿವಿ ಕುಲಪತಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತದೆ. ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಬಳಕೆ ಕುರಿತು ಎಚ್ಚರಿಕೆ ವಹಿಸುವ ಜತೆಗೆ ಯುವ ಜನರಿಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು.
ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಕೈಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಿದ ಅವರು, ಡ್ರಗ್ಸ್ ಮತ್ತು ಇತರ ಮಾದಕ ವಸ್ತು ಬಳಸುವ ಸ್ಥಳಗಳನ್ನು ಗುರುತಿಸಿದ್ದು, ಅಗತ್ಯ ಕಾನೂನು ಕ್ರಮಕೈಗೊಳ್ಳುವ ಕುರಿತು ತಿಳಿಸಿದರು.ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ 1930 ಹಾಗೂ ಡ್ರಗ್ಸ್‌ಗೆ ಸಂಬಂಧಿಸಿದಂತೆ 1933 ಮತ್ತು ಮಹಿಳಾ ಮತ್ತು ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ 1098 ಮತ್ತು ಯಾವುದೇ ರೀತಿಯ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಲು ತಿಳಿಸಲಾಯಿತು. ಅಲ್ಲದೇ ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ಮತ್ತು ಹಾಸ್ಟೆಲ್ ಹತ್ತಿರ ಡ್ರಗ್ಸ್ ಮಾರಾಟ, ಸೇವನೆ ಮತ್ತು ಯಾವುದೇ ರೀತಿಯ ಅಪರಾಧಿಕ ಚಟುವಟಿಕೆಗಳ ಮಾಹಿತಿಗಳು ಕಂಡು ಬಂದಲ್ಲಿ 112 ಸಂಖ್ಯೆಗೆ ಅಥವಾ 944853853 ಈ ಸಂಖ್ಯೆಗೆ ಕರೆ ಮಾಡಿ ತಿಳಿಸಲಾಯಿತು.
ಸಭೆಯಲ್ಲಿ ಹುಬ್ಬಳ್ಳಿ ಕೆಎಂಸಿಯ ಡಾ. ಕಮ್ಮಾರ, ಕೃಷಿ ವಿವಿಯ ಡಾ. ಸರೋಜಿನಿ, ಮೋಹನ ಸಿದ್ಧಾಂತಿ ಸೇರಿದಂತೆ ವಿವಿಧ ಕಾಲೇಜುಗಳ ಸಿಬ್ಬಂದಿ ಇದ್ದರು.