ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯದಲ್ಲಿ ನೋಂದಾಯಿತ ಗುತ್ತಿಗೆದಾರರು ಪ್ರಾಣ ಕಳೆದುಕೊಳ್ಳುವ ಆತಂಕದ ಸ್ಥಿತಿಯಲ್ಲಿರುವುದರಿಂದ ರಾಜ್ಯ ಸರ್ಕಾರ ಐದು ಉಚಿತ ಗ್ಯಾರಂಟಿ ನಿಲ್ಲಿಸಿ, ಕಾಮಗಾರಿಗಳ ಬಿಲ್ ಪಾವತಿಸಬೇಕೆಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯಾದ್ಯಂತ ನೋಂದಾಯಿತ ಗುತ್ತಿಗೆದಾರರು ಈ ಹಿಂದೆ ನಿರ್ವಹಿಸಿದ ಕಾಮಗಾರಿಗೆ ಸಾವಿರಾರು ಕೋಟಿ ರುಪಾಯಿ ಬಿಲ್ ಬಾಕಿ ಇದೆ. ಇದರಿಂದಾಗಿ ಕಟ್ಟಡ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ನೀಡಬೇಕಾಗಿರುವ ಹಣವನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು. ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರಿವೆಂಟರಿ ಹೆಲ್ತ್ ಕೇರ್ ಯೋಜನೆ ಜಾರಿಗೊಳಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಬಿಡುಗಡೆಯಾಗಿರುವ ಸೆಸ್ ಹಣ ಹಿಂದಕ್ಕೆ ಪಡೆದು ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಸಿಎಸ್‌ಸಿ ಸೆಂಟರ್‌ಗಳಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ನಿಲ್ಲಬೇಕು. ನೋಂದಾಯಿತ ಕಾರ್ಮಿಕ ಸಂಘಟನೆಗಳಿಗೆ ಕಟ್ಟಡ ಕಾರ್ಮಿಕರ ನೋಂದಣಿ ಹಾಗೂ ನವೀಕರಣಕ್ಕೆ ಅವಕಾಶ ಕಲ್ಪಿಸಬೇಕು. ಬೋಗಸ್ ನೋಂದಣಿ ರದ್ದಾಗಬೇಕು. ಸೆಸ್ ವಸೂಲಿ ಪ್ರಾಧಿಕಾರ ರಚನೆಯಾಗಬೇಕು. ಈ ಹಿಂದೆ ರಾಜ್ಯದಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಎಲ್ಲಾ ಕಾಮಗಾರಿ ಮೌಲ್ಯಮಾಪನಗೊಳಿಸಲು ಅಧಿಕಾರಿಗಳನ್ನು ತಕ್ಷಣ ನೇಮಕ ಮಾಡಿ ಶೇ.2ರಷ್ಟು ಬಡ್ಡಿಸಹಿತ ಸೆಸ್ ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.ಕಾಂಗ್ರೆಸ್ ಸರ್ಕಾರ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ಶೇ.70ರಷ್ಟು ಕಡಿತಗೊಳಿಸಿದ್ದು, ಈ ಹಿಂದೆ ನೀಡುತ್ತಿದ್ದಂತೆ ವಿದ್ಯಾರ್ಥಿವೇತನ ಮಕ್ಕಳಿಗೆ ಸಿಗಬೇಕು. ಕಾರ್ಮಿಕರ ಸಹಜ ಸಾವಿಗೆ ಐದು ಲಕ್ಷ ರು.ಗಳ ಪರಿಹಾರ ನೀಡಬೇಕು. ಪ್ರತಿ ತಿಂಗಳು ಐದು ಸಾವಿರ ರು.ಪಿಂಚಣಿ ಕೊಡಬೇಕು. ಟೈಲ್ಸ್ ಮತ್ತು ವೆಲ್ಡಿಂಗ್ ಕೆಲಸಗಾರರಿಗೆ ಟೂಲ್ ಕಿಟ್ ಬದಲು ಐದು ಸಾವಿರ ರು.ನಗದು ನೀಡಬೇಕೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಸರ್ಕಾರ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷ ಕೆ.ಗೌಸ್‍ಪೀರ್, ಖಜಾಂಚಿ ಡಿ.ಈಶ್ವರಪ್ಪ, ನರಸಿಂಹಸ್ವಾಮಿ, ನಾದಿಆಲಿ, ಇಮಾಮ್ ಮೊಹಿದ್ದೀನ್, ಚಾಂದ್‍ಪೀರ್, ಮಹಾಂತೇಶ್, ವೈ.ಬಸವರಾಜ್, ಸಲೀಂ, ಫೈರೋಜ್, ತಿಮ್ಮಯ್ಯ, ತಿಪ್ಪೇಸ್ವಾಮಿ, ರಾಜಣ್ಣ, ಪ್ರಸನ್ನ, ರಫಿ, ಗೌಸ್‍ಖಾನ್, ರಾಜಪ್ಪ, ರಘು ಪ್ರತಿಭಟನೆ ನೇತೃತ್ವ ವಹಿಸಿದ್ದರು.