ಮೀನುಗಾರರು, ಪ್ರವಾಸಿಗರ ಮೇಲಿನ ಗೂಂಡಾಗಿರಿ ತಡೆಗಟ್ಟಿ

| Published : Apr 21 2025, 12:47 AM IST

ಸಾರಾಂಶ

ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುವ ಹೊರ ಊರಿನವರು ಪಟ್ಟಣದ ಮೀನುಗಾರರ ಮೇಲೆ ಹಾಗೂ ಪ್ರವಾಸಿಗರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆ.

ಹೊನ್ನಾವರ: ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುವ ಹೊರ ಊರಿನವರು ಪಟ್ಟಣದ ಮೀನುಗಾರರ ಮೇಲೆ ಹಾಗೂ ಪ್ರವಾಸಿಗರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆ. ಇಲ್ಲಿ ನಡೆಯುವ ಗೂಂಡಾಗಿರಿಯನ್ನು ತಡೆಯದಿದ್ದರೆ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಪಪಂ ಸದಸ್ಯ, ಮೀನುಗಾರ ಮುಖಂಡ ಶಿವರಾಜ ಮೇಸ್ತ ಹೇಳಿದರು.ಪಟ್ಟಣದ ಕೆಳಗಿನಪಾಳ್ಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾವಿನಕುರ್ವಾ ಸೇತುವೆ ಆದ ಮೇಲೆ ಪಟ್ಟಣದ ಜನರ ಮೇಲೆ ಗೂಂಡಾಗಿರಿ ನಡೆಸುವುದು ಹೆಚ್ಚಾಗಿದೆ. ಪಟ್ಟಣದ ಕೆಳಗಿನಪಾಳ್ಯದಲ್ಲಿ ಮೀನುಗಾರರ ಬಲೆ ಇಡಲು, ದೋಣಿ ಇಡಲು ಜಾಗವನ್ನು ಖರೀದಿಸಲಾಗಿತ್ತು. ಆದರೆ ಈ ಜಾಗವನ್ನು ಈಗ ಮಾವಿನಕುರ್ವಾದ ಕೆಲವರು ಕಬಳಿಸಲು ಮುಂದಾಗಿದ್ದಾರೆ. ವಾಸುದೇವ ಮೇಸ್ತ ಅವರಿಗೆ ಸಂಬಂಧ ಪಟ್ಟ ಮನೆಯನ್ನು ಮಧ್ಯರಾತ್ರಿಯಲ್ಲಿ ಬಂದು ಧ್ವಂಸ ಮಾಡಲಾಗಿದೆ. ಇದರಿಂದ ಮೀನುಗಾರರಿಗೆ ತುಂಬ ನೋವಾಗಿದೆ. ಮೀನುಗಾರರ ಮೇಲೆ ಸವಾರಿ ನಡೆಸುತ್ತಿರುವವರ ಮೇಲೆ ಪೊಲೀಸ್ ಇಲಾಖೆ ಪ್ರಕರಣ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಕ್ರಿಮಿನಲ್ ಕೇಸ್‌ನಲ್ಲಿ ಇದ್ದವರು ಕೂಡ ಗುಂಡಾಗಿರಿ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಿದರೆ ಸಚಿವರ ಹೆಸರು ಹೇಳುತ್ತಾರೆ. ನಾವು ಮಾಡಿದ್ದೇ ದರ್ಬಾರ್ ಎನ್ನುತ್ತಾರೆ. ಇಷ್ಟು ವರ್ಷ ಕಾಣದ ರೌಡಿಸಂ ಈಗ ನೋಡುತ್ತಿದ್ದೇವೆ. ಇವರ ಮೇಲೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬೆಳಕೊಂಡ ಸೊಸೈಟಿ ಅಧ್ಯಕ್ಷ ಉಮೇಶ ಮೇಸ್ತ ಮಾತನಾಡಿ, ಮೀನುಗಾರರು ಶರಾವತಿ ನದಿಯನ್ನು ನಂಬಿದ್ದಾರೆ. ನೆರೆಹಾವಳಿ ಮತ್ತು ಇತರೆ ತೊಂದರೆ ಆದಾಗ ಮೀನುಗಾರರು ಧಾವಿಸಿ ಸಹಾಯ ಮಾಡುತ್ತಾರೆ. ಇಂದು ಶರಾವತಿಯಲ್ಲಿ ಮಿತಿಮೀರಿ ಬೋಟಿಂಗ್ ಡಿಂಗಿಗಳು ಸಂಚಾರ ಮಾಡುತ್ತಿರುವುದರಿಂದ ಮೀನುಗಾರಿಕೆಗೆ ಕ್ಷಾಮ ಬಂದಿದೆ. ಮೀನುಗಾರರು ಖಾಲಿ ಕೈಯಲ್ಲಿ ಬರುತ್ತಿದ್ದಾರೆ. ಹೀಗಾಗಿ ಮೀನುಗಾರರು ಬೋಟಿಂಗ್ ಉದ್ಯಮಕ್ಕೆ ಹೋಗುತ್ತಿದ್ದಾರೆ. ಆದರೆ ಬೋಟಿಂಗ್ ನಡೆಸುವ ಹೊರ ಊರಿನವರ ದಬ್ಬಾಳಿಕೆಯಿಂದ ಸ್ಥಳಿಯರು ಹಗಲು ರಾತ್ರಿ ಶಬ್ದ ಮಾಲಿನ್ಯದಿಂದ ನಿದ್ದೆ ಮಾಡದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಹೀಗಿದ್ದು ಸ್ಥಳೀಯರು ಗಲಾಟೆ ಮಾಡದೆ ಸಹಿಸಿಕೊಂಡಿದ್ದರು. ಈಗ ಮನೆಯನ್ನು ಕೆಡುವಲು ಮುಂದಾಗಿರುವುದನ್ನು ಮೀನುಗಾರರು ಖಂಡಿಸುತ್ತೇವೆ ಎಂದರು.

ಸ್ಥಳೀಯ ಶಂಕರ ಮೇಸ್ತ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಉದಯರಾಜ ಮೇಸ್ತ, ಮೀನುಗಾರ ಮುಖಂಡ ಲೋಕೇಶ್ ಮೇಸ್ತ, ಗಣಪತಿ ಮೇಸ್ತ, ಸಂತೋಷ ಮೇಸ್ತ, ದಾಮೋದರ ಮೇಸ್ತ ಇದ್ದರು.