ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಸರ್ಕಾರವನ್ನು ನಂಬಿ ಗ್ರಾಮೀಣ ಭಾಗದಲ್ಲಿ ಎಲ್‌ಪಿಜಿ ವಿತರಣಾ ಕೇಂದ್ರಗಳ ಸ್ಥಾಪನೆಗಾಗಿ ತಲಾ ₹50 ಲಕ್ಷದಿಂದ ಹಿಡಿದು ₹2 ಕೋಟಿವರೆಗೆ ಹೂಡಿಕೆ ಮಾಡಲಾಗಿದೆ. ಆದರೆ ನಗರ ವಿತರಕರು ನಿಯಮಬಾಹಿರವಾಗಿ ಗ್ರಾಮೀಣ ಪ್ರದೇಶಗಳಿಗೆ ನುಗ್ಗಿ ಗ್ರಾಹಕರಿಗೆ 25 ದಿವಸಗಳ ಅಂತರದಲ್ಲಿ ರೀಫಿಲ್ ಸಿಲಿಂಡರ್‌ ನೀಡುತ್ತಿದ್ದಾರೆ. ಈ ನಡೆಗೆ ಕಡಿವಾಣ ಹಾಕದಿದ್ದರೆ ಜುಲೈ 1ರಿಂದಲೇ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಎಲ್‌ಪಿಜಿ ಗ್ರಾಮೀಣ ವಿತರಕರ ಫೆಡರೇಷನ್ ರಾಜ್ಯಾಧ್ಯಕ್ಷ ವೈ.ಎನ್.ತಿಪ್ಪಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಗ್ರಾಮೀಣ ಗ್ರಾಹಕರಿಗೆ 45 ದಿವಸಗಳ ಕಾಲಮಿತಿ ನಿಗದಿಪಡಿಸಿದೆ. ನಗರ ವಿತರಕರು ತಮ್ಮ ಸೀಲಿಂಗ್ ಲಿಮಿಟ್ ಮೀರಿ ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳೇ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಗ್ರಾಮೀಣ ಗ್ರಾಹಕರು ನಮಗೂ 25 ದಿವಸಕ್ಕೆ ರೀಫಿಲ್ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಅಡುಗೆ ಅನಿಲ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ರಾಮೀಣ ವಿತರಕರನ್ನು ನೇಮಿಸಿದೆ. ಆದರೆ ಆಯಿಲ್ ಕಂಪನಿಗಳ ನಿಯಮಗಳನ್ನು ಉಲ್ಲಂಘಿಸಿ ಹಳೆಯ ಪ್ರಭಾವಿ ನಗರ ವಿತರಕರು ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುತ್ತಿದ್ದಾರೆ. ಗ್ರಾಮೀಣ ಗ್ರಾಹಕರಿಗೆ, ಹೊಸದಾಗಿ ಏಜೆನ್ಸಿ ಆರಂಭಿಸಿದ ಗ್ರಾಮೀಣ ವಿತರಕರಿಗೆ ವಂಚಿಸುತ್ತಿದ್ದಾರೆ ಎಂದರು.

95 ಕಿ.ಮೀ. ದೂರಕ್ಕೂ ಪೂರೈಕೆ:


ನಿಯಮಗಳ ಪ್ರಕಾರ ಯಾವುದೇ ಅನಿಲ ವಿತರಕರು ತಮ್ಮ ವಿತರಣಾ ಕೇಂದ್ರದಿಂದ ಕೇವಲ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸಿಲಿಂಡರ್ ಪೂರೈಸಬೇಕು. ಆದರೆ ಸಿಎಜಿ ಆಡಿಟರ್ ಪರಿಶೀಲಿಸಿದಾಗ 164 ನಗರ ವಿತರಕರ ಪೈಕಿ 95 ವಿತರಕರು ತಮ್ಮ 15 ಕಿ.ಮೀ. ವ್ಯಾಪ್ತಿ ಮೀರಿ ಸುಮಾರು 40 ರಿಂದ 50 ಕಿ.ಮೀ. ಮತ್ತು ಕೆಲವೆಡೆ 95 ಕಿ.ಮೀ. ದೂರದವರೆಗೂ ಅಕ್ರಮವಾಗಿ ಸಿಲಿಂಡರ್ ಪೂರೈಕೆ ಬೆಳಕಿಗೆ ಬಂದಿದೆ. ಇದು ಸುರಕ್ಷತೆ ದೃಷ್ಟಿಯಿಂದಲೂ ದೊಡ್ಡ ಅಪಾಯ ಎಂದು ಆತಂಕ ವ್ಯಕ್ತಪಡಿಸಿದರು.

ಕಾನೂನು ಹೋರಾಟದ ಎಚ್ಚರಿಕೆ:

ಈ ಅಕ್ರಮಗಳನ್ನು ವಿರೋಧಿಸಿ ಸಂಘಟನೆಯಿಂದ ಜೂನ್ 29ರಂದು ದಾವಣಗೆರೆಯಿಂದ 30 ಕಿ.ಮೀ. ದೂರದ ಕೂಲಂಬಿ ಗ್ರಾಮದಲ್ಲಿ ನಗರ ವಿತರಕರ ಗಾಡಿ ತಡೆದು ಪ್ರತಿಭಟನೆ ನಡೆಸಲಾಗಿತ್ತು. ದಾವಣಗೆರೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಎಲ್‌ಪಿಜಿ ವಿತರಕರ ಸಭೆ ಕರೆದಿದ್ದಾರೆ. ಒಂದುವೇಳೆ ಅವ್ಯವಸ್ಥೆ ಶಾಶ್ವತವಾಗಿ ತಡೆಯದಿದ್ದರೆ, ಜುಲೈ 1ರಿಂದಲೇ ಜಿಲ್ಲಾದ್ಯಂತ ಅಕ್ರಮವಾಗಿ ಪ್ರವೇಶಿಸುವ ನಗರ ವಿತರಕರ ಗಾಡಿಗಳನ್ನು ತಡೆದು ಸಂಘದಿಂದ ತೀವ್ರ ಹೋರಾಟ ಮತ್ತು ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ದೀಪಕ್ ಹೆಬ್ಬಾಳು, ದುಂಡ್ಯೆಪ್ಪ ತ್ಯಾವಣಗಿ, ರಾಜೇಶ್ ಸಾಲೂರು, ಸಾಸ್ವೆಹಳ್ಳಿ ಉಮಾಶಂಕರ, ಚೀಲೂರು ಸ್ವಾಮಿ ಇತರರು ಇದ್ದರು.