ಅಕ್ರಮ ಮದ್ಯ ಮಾರಾಟ ನಿಲ್ಲಿಸಿ: ಅಹವಾಲು

| Published : Apr 23 2025, 12:33 AM IST

ಸಾರಾಂಶ

ಯಳಂದೂರು ಪೊಲೀಸ್ ಠಾಣೆ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿ ಠಾಣೆ ಸಿಪಿಐ ಶ್ರೀಕಾಂತ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪೊಲೀಸ್ ಠಾಣೆಯ ಮುಂಭಾಗ ರಾಜಾರೋಷವಾಗಿ ಬೈಕ್‌ನಲ್ಲಿ ಮದ್ಯ ಸಾಗಿಸುತ್ತಿದ್ದಾರೆ. ಮದ್ದೂರು ಬೈಪಾಸ್‌ನಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಇಲ್ಲಿ ರಸ್ತೆಯ ಮೇಲೆ ದುಬ್ಬ ಹಾಕಿಸಿ ಎಂದು ಸಾರ್ವಜನಿಕರು ಪೊಲೀಸರಿಗೆ ಅಹವಾಲು ಸಲ್ಲಿಸಿದರು.

ಕುಂತೂರು ಗ್ರಾಮದಲ್ಲಿ ದಲಿತರಿಗೆ ಕುಂತೂರು ಮಾರಮ್ಮನ ದೇವಾಲಯ ಪ್ರವೇಶಕ್ಕೆ ಅಡ್ಡಿಯಾಗಿದೆ. ಈ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದರೂ ಕೂಡ ತಾರತಮ್ಯ ನಡೆಯುತ್ತಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಪೊಲೀಸರ ಮುಂದೆ ಸಮಸ್ಯೆ ಬಿಚ್ಚಿಟ್ಟರು.

ದಸಂಸ ಜಿಲ್ಲಾ ಸಂಚಾಲಕ ಕಂದಹಳ್ಳಿ ನಾರಾಯಣ್ ಮಾತನಾಡಿ, ತಾಲೂಕಿನ ಕೆಲ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಸ್ಮಶಾನ ಇಲ್ಲ, ದಯವಿಟ್ಟು ಈ ಬಗ್ಗೆ ತಹಸೀಲ್ದಾರ್‌ಗೆ, ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಗೆ ಹೋಗಿರುವ ನಿರಾಶ್ರಿತರಿಗೆ ನೀಡುವ ಪರಿಹಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಜನಪ್ರತಿನಿಧಿಗಳು ಹೆಚ್ಚಿನ ರೀತಿ ಗಮನ ಹರಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಯಳಂದೂರು ಬಸ್ ನಿಲ್ದಾಣದಲ್ಲಿ ವಾಲ್ಮೀಕಿ ಸಮುದಾಯ ಭವನದ ಮುಂಭಾಗ ಶೌಚಾಲಯ ಶಿಥಿಲವಾಗಿದ್ದು ಮಳೆಗಾಲದ ಹಿನ್ನೆಲೆ ಶೌಚಾಲಯ ಕಟ್ಟಡ ಕುಸಿದು ಬಿದ್ದು ಅನಾಹುತ ಆಗುವ ಮುನ್ನ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಪಂ ಮಾಜಿ ಸದಸ್ಯ ವೈ.ಎಸ್.ಭೀಮಪ್ಪ ಮಾತನಾಡಿ, ಪಪಂ ಕಚೇರಿಯಲ್ಲಿ ಅಧಿಕಾರಿ ವರ್ಗ ಬಿ ಖಾತೆ ಸರಿಯಾದ ಸಮಯಕ್ಕೆ ಮಾಡುತ್ತಿಲ್ಲ. ಮುಖ್ಯಾಧಿಕಾರಿ ಯಾವಾಗಲೂ ಹನೂರು ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಅಕ್ರಮ ಮದ್ಯ ಮಾರಾಟಗಾರರ ಸಂಖ್ಯೆ ಹೆಚ್ಚಾಗಿದೆ‌. ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಕಂದಹಳ್ಳಿ ಮಹೇಶ್ ಮಾತನಾಡಿ, ಕಂದಹಳ್ಳಿ ಗ್ರಾಮದ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಚರಂಡಿಗಳನ್ನು ಮಾಡದೆ ಅನೈರ್ಮಲ್ಯ ಸೃಷ್ಟಿಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿಯಾಗಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಲಿ ಇಲ್ಲ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಬಳೇಪೇಟೆಯ ಸರ್ಕಲ್‌ನಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿದೆ‌ ಎಂದು ಮಲ್ಲಿಕಾರ್ಜುನ ದೂರಿದರು. ಕುಣಗಳ್ಳಿಯಲ್ಲಿ ಶಾಲೆಯ ಮುಂದೆಯೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ದೂರಿದರು.

ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಮಾತನಾಡಿ, ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಯಾವುದೇ ಸಮಸ್ಯೆಗಳಿದ್ದರೂ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸುತ್ತೇವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪೋಲೀಸ್ ಇನ್ಸ್‌ಪೆಕ್ಟರ್ ಆಕಾಶ್, ಅಗರ ಪೊಲೀಸ್ ಠಾಣೆಯ ಪಿಎಸ್ಐ ಉಮಾವತಿ, ಮುಖಂಡರಾದ ವಡಗೆರೆ ದಾಸ್, ನರಸಿಂಹ ನಾಯಕ, ರೈತ ಮುಖಂಡರು ಹಾಗೂ ಎಸ್ಟಿ ಎಸ್ಟಿ ಸಮುದಾಯದ ಪ್ರಗತಿಪರ ಸಂಘಟನೆಗಳು ಮತ್ತು ಮುಖಂಡರು ಹಾಜರಿದ್ದರು.