ಈಚೆಗೆ ಕೆಲವು ವರ್ಷಗಳಿಂದ ಅವ್ಯಾಹತ, ಅವೈಜ್ಞಾನಿಕ, ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆಯಿಂದ ನದಿ ದಡವಾಗಲಿ, ನದಿಯ ಪಾತ್ರವಾಗಲಿ ಸುರಕ್ಷಿತವಾಗಿ ಉಳಿದಿಲ್ಲ. ಇದನ್ನು ತಡೆದು ಪರಿಸರ ರಕ್ಷಿಸಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆಯ ಸಂಚಾಲಕ ಬಿ.ಮಗ್ದುಮ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹರಿಹರ

ಈಚೆಗೆ ಕೆಲವು ವರ್ಷಗಳಿಂದ ಅವ್ಯಾಹತ, ಅವೈಜ್ಞಾನಿಕ, ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆಯಿಂದ ನದಿ ದಡವಾಗಲಿ, ನದಿಯ ಪಾತ್ರವಾಗಲಿ ಸುರಕ್ಷಿತವಾಗಿ ಉಳಿದಿಲ್ಲ. ಇದನ್ನು ತಡೆದು ಪರಿಸರ ರಕ್ಷಿಸಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆಯ ಸಂಚಾಲಕ ಬಿ.ಮಗ್ದುಮ್ ಮನವಿ ಮಾಡಿದರು.

ತಾಲೂಕಿನಲ್ಲಿ ಶುಕ್ರವಾರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಗೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನ ಹಲವು ಶಾಲಾ ಮಕ್ಕಳನ್ನು ಶಾಲೆಯ ಆಡಳಿತ ಮಂಡಳಿಯವರು ಹೊರ ಸಂಚಾರಕ್ಕೆಂದು ನದಿ ದಡಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಮರಳಿನ ರಾಶಿ, ಗಿಡ, ಮರಗಳ ಸುಂದರ ಪರಿಸರವನ್ನು ತೋರಿಸುತ್ತಿದ್ದರು ಎಂದರು.

ತಾಲೂಕಿನ ಇಡೀ 35 ಕಿ.ಮೀ. ನದಿ ದಡ ಹಾಗೂ ನದಿಯ ಪಾತ್ರವು ಶತ್ರು ರಾಷ್ಟ್ರದವರು ಕೊಳ್ಳೆ ಹೊಡೆದು ಹತವಾದ ಕೋಟೆಯ ರೂಪದಲ್ಲಿ ಬಿಂಬಿತವಾಗುತ್ತಿದೆ. ಇಟ್ಟಿಗೆ ಭಟ್ಟಿಗೆ ಬೇಕಾದ ಕೆಂಪು ಮಣ್ಣು ಇರುವ ಈ ನದಿ ದಡದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆದು ಹತ್ತಾರು ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ 15 ರಿಂದ 20 ಅಡಿಗಳ ಆಳದವರೆಗೆ ಕಂದಕಗಳು ಉಂಟಾಗಿವೆ. ಪರಿಣಾಮವಾಗಿ ಹಲವು ಸ್ಮಶಾನಗಳು, ರಸ್ತೆ, ವಿದ್ಯುತ್ ಟವರ್, ಕಂಬ, ಟಿಸಿಗಳಿಗೆ ಗಂಡಾಂತರ ಎದುರಾಗಿದೆ. ನದಿ ದಡದಲ್ಲಿ ಬೆಳೆದು ನಿಂತಿದ್ದ ದೊಡ್ಡ ಗಾತ್ರದ ಸಾವಿರಾರು ಮರ, ಗಿಡಗಳ ಮಾರಣ ಹೋಮವಾಗಿದೆ. ನದಿ ದಡದ ಭೌಗೋಳಿಕ ರಚನೆಯ ಆಕಾರ ವಿಕಾರವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಗುತ್ತಿಗೆದಾರರು ನದಿ ದಡವೂ ಸೇರಿದಂತೆ ನದಿ ಪಾತ್ರದಿಂದಲೂ ಮರಳನ್ನು ಸಂಗ್ರಹಿಸುತ್ತಾರೆ. ಜೆಸಿಬಿ, ಇಟಾಚಿ ಯಂತ್ರಗಳಿಂದ 15 ರಿಂದ 20 ಅಡಿ ಅಳದವರೆಗೆ ಬಗೆದು ಮರಳನ್ನು ತೆಗೆಯಲಾಗುತ್ತಿದೆ. ಇದರಿಂದಾಗಿ ನೀರು ಬಂದಾಗ ನದಿಯಲ್ಲಿ ಉಂಟಾಗುವ ಕಂದಕಗಳಲ್ಲಿ ಸ್ನಾನ ಮಾಡಲು ಹೋದವರು ಮುಳುಗಿ ಹತ್ತಾರು ಜನರು ಬಲಿಯಾಗಿದ್ದಾರೆ, ನೂರಾರು ದನ,ಕರುಗಳು ಅಸು ನೀಗಿವೆ ಎಂದು ದೂರಿದರು.

ನದಿ ಮತ್ತು ನದಿ ದಡದಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವುದರಿಂದ ನದಿಯ ನೀರು ಕಲುಷಿತವಾಗಿದೆ. ಈಚೆಗೆ ದಾವಣಗೆರೆಗೆ ಭೇಟಿ ನೀಡಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ನರೇಂದ್ರಸ್ವಾಮಿಯವರೂ ಕೂಡ ತುಂಗಭದ್ರ ನದಿಯು ಈ ಭಾಗದಲ್ಲಿ ಅತ್ಯಂತ ಕಲುಷಿತವಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವುದು ಇದಕ್ಕೆ ಸಾಕ್ಷಿ ಎಂದರು.

ಆದ್ದರಿಂದ ತಾಲೂಕಿನ ನದಿ ಹಾಗೂ ನದಿ ದಡದಲ್ಲಿ ಅಕ್ರಮ ಮತ್ತು ಸಕ್ರಮವಾಗಿ ನಡೆಯುವ ಮಣ್ಣು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಯಬೇಕು ಎಂದರು.

ಈ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ, ಇತರರು ಇದ್ದರು.