ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ವಿಷಯ ಮುನ್ನೆಲೆಗೆ ಬರುವ ಮುನ್ನವೇ ತಾಲೂಕಿನ ಮಲಿಯೂರು, ಹಲಗೂರು ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ರಾಜ್ಯ ಮಟ್ಟದಲ್ಲಿ ದೊಡ್ಡ ಚರ್ಚೆಯಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ವಿರುದ್ಧ ಅಭಿಮಾನ ನಡೆದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದರು.
ಗೃಹ ಸಚಿವ ಪರಮೇಶ್ವರ್ ಅವರು ಜಿಲ್ಲೆಗೆ ಭೇಟಿ ನೀಡಿದಾಗ ಹಲವು ಠಾಣೆ ಹಾಗೂ ತಾಲೂಕು ಮಟ್ಟದಲ್ಲಿ ಕುಂದು ಕೊರತೆ ಸಭೆಗಳನ್ನು ನಡೆಸುವಂತೆ ತಿಳಿಸಿದ್ದ ಹಿನ್ನೆಲೆಯಲ್ಲಿ ಸಚಿವರ ಸೂಚನೆಯಂತೆ ಎಲ್ಲೆಡೆ ಸಭೆ ನಡೆಸಿ ಎಲ್ಲರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲು ಮುಂದಾಗಿದ್ದೇವೆ. ಅಸ್ಪೃಶ್ಯತೆ ಆಚರಣೆ, ದೌರ್ಜನ್ಯ ಹಾಗೂ ಕಂದಾಯ ಇಲಾಖೆಯಲ್ಲಿನ ಸಾಕಷ್ಟು ವಿಷಯಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ ಎಂದರು.ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ, ಸಾಮಾಜಿಕ ಬಹಿಷ್ಕಾರ, ದೇವಸ್ಥಾನಗಳಿಗೆ ಪ್ರವೇಶ ನಿರಾಕರಣೆ ಇಂಥ ವಿಷಯಗಳ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೆ ತ್ವರಿತಗತಿಯಲ್ಲಿ ಕ್ರಮ ವಹಿಸಲಾಗುವುದು. ಮೈಕ್ರೋ ಫೈನಾನ್ಸ್ ವಿರುದ್ಧ ಮುಂದಿನ ದಿನಗಳಲ್ಲಿ ನಿಯಮಗಳು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂದರು.
ಜಿಲ್ಲೆಯಲ್ಲಿಯೇ ಅತಿಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಾಲೂಕಿನಲ್ಲಿ ವಾಸವಿದ್ದು, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಕಂದಾಯ ಇಲಾಖೆ ಸಮಸ್ಯೆಗಳ ಬಗ್ಗೆ ಅರಣ್ಯ, ಅಬಕಾರಿ ಇಲಾಖೆಗಳು ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ತಾಲೂಕು ಮಟ್ಟದಲ್ಲಿ ಸಭೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು.ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣಗಳ ಬಗ್ಗೆ ಈ ಠಾಣೆ ತೆರೆದಿದ್ದು, ತ್ವರಿತಗತಿಯಲ್ಲಿ ತನಿಖೆ ನಡೆಸಿ ಕ್ರಮ ವಹಿಸಲಾಗುವುದು. ಜಿಲ್ಲೆಯ 63 ಪ್ರಕರಣಗಳಲ್ಲಿ 7 ಪ್ರತಿ ದೂರು ದಾಖಲಾಗಿದ್ದು, ಎಲ್ಲವೂ ತನಿಖೆ ನಡೆಯುತ್ತಿದೆ ಎಂದರು.ಸಭೆಯಲ್ಲಿ ಮಿಕ್ಕೆರೆ ಶೇಖರ್, ಗೌಡಗೆರೆ ಜಯಚಂದ್ರ ಮಾತನಾಡಿ, ಮಿಕ್ಕೆರೆ ಹಾಗೂ ಗೌಡಗೆರೆ ಗ್ರಾಮಗಳಲ್ಲಿ ಒತ್ತುವರಿಯಾಗಿರುವ ದಲಿತರ ಸ್ಮಶಾನದ ವಿಚಾರ ಸರ್ವಣೀಯರು ಮತ್ತು ದಲಿತರ ನಡುವೆ ಗಲಾಟೆ ನಡೆದು ಸಾಮರಸ್ಯ ಹಾಳಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಗ್ರಾಮದಲ್ಲಿ ದಲಿತರು ಶವ ಹೂಳಲು ಜಾಗವಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ತಹಸೀಲ್ದಾರ್ ಅವರಿಗೆ ಪತ್ರ ಬರೆದು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಸ್ಪಿ ತಿಳಿಸಿದರು.ಕಿರುಗಾವಲು ಅನಿಲ್ ಕುಮಾರ್ ಮಾತನಾಡಿ, ಮೇಗಳಾಪುರ ಗ್ರಾಮದಲ್ಲಿ ದಲಿತರು ಪೂಜಿಸುವ ದೇವಸ್ಥಾನದಲ್ಲಿನ ವಸ್ತುಗಳ ಕಳವಿನ ಬಗ್ಗೆ ದೂರು ನೀಡಿದ್ದರೂ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಗಳ ಬಳಿ ಕಸ ಸುರಿಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ತೊರೆಕಾಡನಹಳ್ಳಿ ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಎಸ್ಸಿ ಎಸ್ಟಿ ಪ್ರಕರಣಗಳ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ದಲಿತರ ಭೂ ಸಮಸ್ಯೆ ಬಗೆಹರಿಸುವ ಸಂಬಂಧ ಕಂದಾಯ, ಅರಣ್ಯ ಹಾಗೂ ಅಬಕಾರಿ ಇಲಾಖೆಗಳೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.ಬಿಎಸ್ಪಿ ತಾಲೂಕು ಘಟಕದ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ನಿಜವಾದ ಅಸ್ಪೃಶ್ಯತೆ ಇರುವುದು ಪೊಲೀಸ್ ಠಾಣೆಯಲ್ಲಿಯೇ. ಹಲವೆಡೆ ಸಂದರ್ಶಕರ ಕೊಠಡಿಗಳ ಕೊರತೆ ಇದೆ. ಈ ಬಗ್ಗೆ ಪೊಲೀಸರು ಜಾಗೃತಿ ವಹಿಸಬೇಕು ಎಂದರು.
ಪುರಸಭೆ ಮಾಜಿ ಸದಸ್ಯ ಕಿರಣ್ ಶಂಕರ್ ಮಾತನಾಡಿ, ಸಿದ್ದಾರ್ಥನಗರದಲ್ಲಿ ಕೆಲವರು ಅನ್ಯಕೋಮಿನ ಯುವಕರೊಂದಿಗೆ ಸೇರಿ ಮಾದಕ ವ್ಯಸನಿಗಳು, ಮದ್ಯದ ಆಮಲಿನಲ್ಲಿ ವಾಯು ವಿಹಾರಕ್ಕೆ ಹೋಗುವ ಮಹಿಳೆಯರನ್ನು ಚುಡಾಯಿಸುತ್ತಾರೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.ಬೆಳಕವಾಡಿ ಪ್ರೊ.ರಂಗಸ್ವಾಮಿ ಮಾತನಾಡಿ, ತಾಸೂಕಿನಲ್ಲಿ ಎಸ್ಸಿ ಎಸ್ಟಿ ಕುಂದುಕೊರತೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ ಎಂದರು.
ಕಲ್ಕುಣಿ ಕೆ.ಎಂ.ನಂಜುಂಡಸ್ವಾಮಿ ಮಾತನಾಡಿ, ಸ್ಥಳೀಯ ಪೊಲೀಸರು ಎಷ್ಟೇ ಕ್ರಮ ವಹಿಸಿದ್ದರೂ ಕೆಲವೆಡೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ್ದರೆ ಪೊಲೀಸರು ಬರುವ ಮುನ್ನವೇ ಮಾರಾಟ ಮಾಡುವವರಿಗೆ ಕೆಲವರು ಮಾಹಿತಿ ನೀಡುತ್ತಾರೆ ಕಿಡಿಕಾರಿದರು.ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಪ್ರತಿ ದೂರು ಪಡೆಯುವುದು ಸರಿಯಲ್ಲ. ಮಹಜರ್ ಮಾಡಿ ಸರಿಯಾದ ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆಯ ಅಧಿಕಾರಿಗಳೇ ಕಾರಣ, ಅಧಿಕಾರಿಗಳ ಲಂಚದ ದಾಹಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇಂಥ ವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂದರು.
ಹಾಡ್ಲಿ ಸುರೇಶ್ ಮಾತನಾಡಿ, ಇನ್ನೂ ಕೆಲವೆಡೆ ಅಸ್ಪೃಶ್ಯತೆ ಆಚರಣೆಯಾಗುತ್ತಿದೆ. ಕ್ಷೌರಿಕ ಅಂಗಡಿಗಳು ಹಾಗೂ ಹೋಟೆಲ್ ಗಳಲ್ಲಿ ದಲಿತರ ನಿಷೇಧ, ಈ ಬಗ್ಗೆ ಸಭೆ ನಡೆಸುವ ಭರವಸೆ ಈಡೇರಿಲ್ಲ ಎಂದರು.ದುಗ್ಗನಹಳ್ಳಿ ನಾಗರಾಜು ಮಾತನಾಡಿ, ತಾಲೂಕಿನ 16 ಎಸ್ಸಿ ಎಸ್ಟಿ ವಸತಿ ಶಾಲೆಗಳಿಗೆ ಅಲ್ಲಿನ ಬೀಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಸರಗೂರು ಕುಮಾರಸ್ವಾಮಿ ಮಾತನಾಡಿ, ಐನೂರಹುಂಡಿಯ ಇಂದಿರಾ ವಸತಿ ಶಾಲೆ ಕಾಂಪೌಂಡ್ ನಿರ್ಮಾಣ ಮಾಡಲು ಸರ್ವಣೀಯರಿಂದ ತೊಂದರೆಯಾಗುತ್ತಿದೆ. ಅಲ್ಲದೇ, ಶಾಲೆಯ ಜಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಪಾಯ ತೆಗೆದಿದ್ದಾರೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ತಾಪಂ ಇಒರೊಂದಿಗೆ ಚರ್ಚಿಸಿ ಕ್ರಮ ವಹಿಸುವಂತೆ ಬೆಳಕವಾಡಿ ಪಿಎಸ್‌ಐಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದರು. ಇದೇ ವೇಳೆ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಅವರನ್ನು ತಾಲೂಕಿನ ದಲಿತ ಮುಖಂಡರು ಅಭಿನಂದಿಸಿದರು.
ಸಭೆಯಲ್ಲಿ ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐಗಳಾದ ಬಿ.ಎಸ್.ಶ್ರೀಧರ್, ಬಿ.ಜಿ.ಮಹೇಶ್, ಎಂ.ರವಿಕುಮಾರ್ ಇದ್ದರು.