ಸಾರಾಂಶ
ಗಣಿ, ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಚಿತ್ರದುರ್ಗ ಜಿಲ್ಲೆ ಕಡ್ಲೇಗುದ್ದು ಗ್ರಾಮಸ್ಥರ ಮನವಿ
ಕನ್ನಡಪ್ರಭ ವಾರ್ತೆ ದಾವಣಗೆರೆದಿನನಿತ್ಯವೂ ಸುಮಾರು 150ಕ್ಕೂ ಅಧಿಕ ಅದಿರು ಲಾರಿಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಜನ, ಜಾನುವಾರು ಆರೋಗ್ಯ, ಪರಿಸರಕ್ಕೂ ಮಾರಕವಾದ ಹಿನ್ನೆಲೆಯಲ್ಲಿ ಅದಿರು ಲಾರಿಗಳ ಸಂಚಾರ ತಡೆಯಲು ಚಿತ್ರದುರ್ಗ ಜಿಲ್ಲೆಯ ಕಡ್ಲೆಗುದ್ದು ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನರಿಗೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ನಿವಾಸ ಶಿವಪಾರ್ವತಿಗೆ ಭೇಟಿ ನೀಡಿದ್ದ ಚಿತ್ರದುರ್ಗ ಜಿಲ್ಲೆ ಕಡ್ಲೆಗುದ್ದು ಗ್ರಾಮಸ್ಥರು ತಮ್ಮ ಊರಿಗೆ ಮಾರಕವಾಗುತ್ತಿರುವ ಅದಿರು ಲಾರಿಗಳ ಸಂಚಾರವನ್ನು ಬಂದ್ ಮಾಡಿಸುವ ಮೂಲಕ ತಮ್ಮ ಗ್ರಾಮಸ್ಥರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವಂತೆ ಮನವಿ ಮಾಡಿದರು.ಈ ವೇಳೆ ಮಾತನಾಡಿದ ಗ್ರಾಮಸ್ಥರು, ಜಾನ್ ಮೈನ್ಸ್ ಹೆಸರಿನ ಗಣಿಗಾರಿಕೆ ಕಂಪನಿಯು ಅದಿರು ಸಾಗಾಣಿಕೆ ಮಾಡುತ್ತಿದೆ. ನಿತ್ಯವೂ ಕಂಪನಿಯ ಸುಮಾರು 150 ಕ್ಕೂ ಹೆಚ್ಚು ಅದಿರು ಲಾರಿಗಳು ತಮ್ಮ ಊರಿನ ಮಾರ್ಗವಾಗಿಯೇ ಅದಿರು ಸಾಗಿಸುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.
ಜನರಿಗೆ ತೊಂದರೆ:ಅದಿರು ಲಾರಿಗಳ ಸಂಚಾರದಿಂದಾಗಿ ಇಡೀ ಊರು ಧೂಳುಮಯವಾಗಿದ್ದು, ಶುದ್ಧ ಗಾಳಿಯೆಂಬುದೇ ತಮಗೆಲ್ಲರಿಗೂ ಮರೀಚಿಕೆಯಾಗಿದೆ. ಹಸುಗೂಸುಗಳು, ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು, ಅಸ್ತಮಾ, ಉಸಿರಾಟ ಸಮಸ್ಯೆ ಇರುವವರಿಗೂ ಸಮಸ್ಯೆಯಾಗುತ್ತಿದೆ. ಜನರಷ್ಟೇ ಅಲ್ಲ, ಜಾನುವಾರುಗಳಿಗೂ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ದಿನದಿನಕ್ಕೂ ಗ್ರಾಮದ ಮಕ್ಕಳಿಂದ ವೃದ್ಧರವರೆಗೆ ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದಿರು ಸಾಗಿಸುವ ಲಾರಿಗಳ ಸಂಚಾರಕ್ಕೆ ಸರಿಯಾದ ರಸ್ತೆಗಳ ವ್ಯವಸ್ಥೆ ಇಲ್ಲ. ಸಂಬಂಧಿಸಿದ ಇಲಾಖೆಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಇದೇ ರೀತಿ ನಿರ್ಲಕ್ಷ್ಯವನ್ನು ಚಿತ್ರದುರ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದುವರಿಸಿದರೆ ಕಡ್ಲೇಗುದ್ದು ಗ್ರಾಮದ ರಸ್ತೆಯನ್ನೇ ಬಂದ್ ಮಾಡಿ, ಅದಿರು ಲಾರಿಗಳನ್ನು ತಡೆದು ನಿಲ್ಲಿಸಿದ್ದೇವೆ ಎಂದು ತಿಳಿಸಿದರು.ಕ್ರಮದ ಭರವಸೆ:
ಮನವಿ ಆಲಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಈ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ, ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅದಿರು ಲಾರಿಗಳ ಸಂಚಾರ ತಡೆಯುವ ಎಚ್ಚರಿಕೆಚಿತ್ರದುರ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು, ಅಲ್ಲಿನ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಅ.23ರಿಂದ ಕಡ್ಲೇಗುದ್ದು ಗ್ರಾಮದ ಮಾರ್ಗವಾಗಿ ಅದಿರು ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂಬ ಭರವಸೆ ನೀಡಿದ್ದಾರೆ. ಒಂದು ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳ ಭರವಸೆ ಮೀರಿ, ಅದಿರು ಲಾರಿಗಳ ಸಂಚಾರಕ್ಕೆ ಮುಂದಾದರೆ ಅವುಗಳನ್ನು ತಡೆಯುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.