ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಾಗಿರುವ ಹೇಮಾವತಿ ನೀರಿನ ನಮ್ಮ ಪಾಲನ್ನು ಮೀಸಲಿರಿಸಬೇಕು. ರೈತರ ಹಾಗೂ ಸಾರ್ವಜನಿಕರ ಹಿತ ಕಾಪಾಡುವುದು ಹಾಗೂ ಜಿಲ್ಲೆಯ ಕುಡಿಯುವ ನೀರಿಗೆ ಮಾರಕವಾಗಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್‌ ಒತ್ತಾಯಿಸಿದರು.

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ಬಹು ದಿನಗಳಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಈ ಬಗ್ಗೆ ಸರ್ಕಾರ ಜಿಲ್ಲೆಯ ಜನರಪರವಾಗಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಈ ಯೋಜನೆಯಿಂದ ತುಮಕೂರು ಜಿಲ್ಲೆಗೆ ಮೀಸಲಿರುವ ಹೇಮಾವತಿ ನೀರಿನ ಪಾಲು ನ್ಯಾಯ ಸಮ್ಮತವಾಗಿ ನಮಗೆ ದೊರೆಯುವುದಿಲ್ಲ ಎಂಬ ಅಂತಕ ನಮ್ಮದಾಗಿದೆ. ಈ ಯೋಜನೆಯು ಜಾರಿಗೊಂಡರೆ ಜಿಲ್ಲೆಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮರಣ ಶಾಸನವಾಗಲಿದೆ ಎಂದು ಹೇಳಿದರು.

ಹೇಮಾವತಿ ನಾಲಾ ವಲಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲಾ ಆಧುನೀಕರಣ ಕಾಮಗಾರಿ ಚಾಲ್ತಿಯಲ್ಲಿದ್ದು ಮುಗಿಯುವ ಹಂತದಲ್ಲಿದೆ. ಆದರೆ ಏಕಾಏಕಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಅನುಷ್ಟಾನಕ್ಕೆ ತಂದಿರುವುದರಿಂದ ಸಾವಿರಾರು ಕೋಟಿ ಹಣ ಪೋಲಾಗುವುದರ ಜೊತೆಗೆ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ತುಮಕೂರು ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳವಣಿಗೆಯಾಗಿ, ಜನಸಂಖ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ನಮಗೆ ಮೀಸಲಿಡಬೇಕು. ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಿರುವ ಹೇಮಾವತಿ ನೀರಿನ ನಮ್ಮ ಪಾಲನ್ನು ಮೀಸಲಿರಿಸಿ, ರೈತರ ಹಾಗೂ ಸಾರ್ವಜನಿಕರ ಹಿತ ಕಾಪಾಡುವುದು ಹಾಗೂ ಜಿಲ್ಲೆಗೆ ಮಾರಕವಿರುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.


ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಕೆನಾಲ್ ಅಭಿವೃದ್ಧಿಗೆ 500 ಕೋಟಿರು. ಮಂಜೂರು ಮಾಡಿದ್ದರು. ಪ್ರಸ್ತುತ ಶೇ80 ರಷ್ಟು ಕೆಲಸ ಪೂರ್ಣಗೊಂಡಿದ್ದು, ಹೇಮಾವತಿ ನೀರು ಬುಗುಡನಹಳ್ಳಿ ಕೆರೆಗೆ ಸರಾಗವಾಗಿ ಬರುತ್ತಿದೆ ಎಂದು ಶಾಸಕರು ತಿಳಿಸಿದರು.

ತುಮಕೂರು ನಗರದ ಜನಸಂಖ್ಯೆ ೫ ಲಕ್ಷ ದಾಟಿದ್ದು, ಕುಡಿಯುವ ನೀರಿಗಾಗಿ ಹೇಮಾವತಿಯನ್ನು ನಗರದ ಜನತೆ ಅವಲಂಭಿಸಿದ್ದಾರೆ. ಈ ಒಂದು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ತುಮಕೂರು ನಗರದ ಜನತೆಗೆ ಮರಣ ಶಾಸನವಾಗಲಿದೆ. ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ರಾಜ್ಯ ಸರ್ಕಾರ ಈ ಕೂಡಲೇ ಕೈಬಿಡಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.