ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ

| Published : Aug 30 2024, 01:00 AM IST / Updated: Aug 30 2024, 01:01 AM IST

ಸಾರಾಂಶ

ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರು ಮಹಿಳೆಯರ ಧ್ವನಿಯಾಗಿ ಹೋರಾಟದ ಅಲೆಯನ್ನೇ ಎಬ್ಬಿಸಿದ್ದರು. ಇಷ್ಟಾಗಿಯೂ ಇಂದು ಸಮಾಜದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೆ ಇವೆ.

ಧಾರವಾಡ:

ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ 133ನೇ ಸ್ಮರಣೆ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ವಿರೋಧಿಸಿ ಗುರುವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೊಕರೆ ಮಾತನಾಡಿ, ಮಹಿಳೆಯರಿಗೆ ಶಿಕ್ಷಣದ ಹಕ್ಕು, ಬಾಲ್ಯವಿವಾಹ, ಬಹುಪತ್ನಿತ್ವ ಹಾಗೂ ಆಜೀವ ವೈಧವ್ಯದಂತಹ ಮೌಢ್ಯಗಳ ವಿರುದ್ಧ ಹೋರಾಟ, ಅನ್ಯಾಯ, ಶೋಷಣೆ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹೋರಾಟಗಳ ಅಲೆಯನ್ನೇ ಎಬ್ಬಿಸಿದ್ದರು. ಇಷ್ಟಾಗಿಯೂ ಇಂದಿಗೂ ಸಮಾಜದಲ್ಲಿ ಮಹಿಳೆಯರ ಮೇಲೆ ವಿವಿಧ ಸ್ವರೂಪಗಳಲ್ಲಿ ದೌರ್ಜನ್ಯ ಮುಂದುವರಿದಿದೆ. ಇದೆಲ್ಲವೂ ನಿಲ್ಲಬೇಕು ಎಂದರು.

ಪುರುಷ ಪ್ರಧಾನ ಧೋರಣೆಯ ಅಟ್ಟಹಾಸ, ವ್ಯಾಪಾಕವಾಗಿ ಹರಡುತ್ತಿರುವ ಅಶ್ಲೀಲ ಸಿನೆಮಾ, ಸಾಹಿತ್ಯ, ಮದ್ಯ-ಮಾದಕ ವಸ್ತುಗಳ ಹಾವಳಿ, ಆ್ಯಸಿಡ್ ದಾಳಿ, ಅತ್ಯಾಚಾರ, ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ, ಹೆಣ್ಣು ಭ್ರೂಣ ಹತ್ಯೆ ದಿನೇ-ದಿನೇ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಪಾಧ್ಯಕ್ಷೆ ದೇವಮ್ಮ ದೇವತ್ಕಲ್, ವಿದ್ಯಾಸಾಗರರ ಆಶೋತ್ತರಗಳಿಗೆ ವಿರುದ್ಧವಾದ ವಾತಾವರಣ ನಿರ್ಮಾಣವಾಗಿದೆ. ಅವರು ಕಂಡಿದ್ದ ಮಹಿಳಾ ವಿಮುಕ್ತಿಯ ಕನಸ್ಸು ನನಸಾಗದೇ ಉಳಿದಿದೆ. ಹಾಗಾಗಿ ಅವರ 133ನೇ ಸ್ಮರಣ ಮಾಸಾಚರಣೆ ವೇಳೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಸಾಮಾಜಿಕ ದೌರ್ಜನ್ಯ ವಿರೋಧಿಸಿ ಮಹಿಳೆಯರು ಹಾಗೂ ದೇಶದ ಜನತೆ ಒಕ್ಕೊರಲಿನಿಂದ ಇಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ ಎಂದರು. ಅಧ್ಯಕ್ಷೆ ಮಧುಲತಾ ಗೌಡರ, ಸದಸ್ಯರಾದ ಅರುಣ ದಾದುಗೋಳ, ಪವಿತ್ರ ಮಾಳಾಪುರ, ನೀಲ್ಲಮ್ಮ ಕಬಾಡಗಿ, ಫಕ್ಕೀರವ್ವ ಸಾರಾವರಿ, ಸಿದ್ದಮ್ಮ ಹುಬ್ಬಳ್ಳಿ, ಅನುಸೂಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.