ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಂದಾಲ್ ಸೇರಿದಂತೆ ಜಿಲ್ಲೆಯ ಕೈಗಾರಿಕೆಗಳಿಗೆ ನಿಗದಿಗೊಳಿಸಿರುವ ನೀರನ್ನು ರೈತರ ಬೆಳೆಗಳಿಗೆ ಒದಗಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಡೆದ ಐಸಿಸಿ ಸಭೆಯಲ್ಲಿ ಎಚ್‌ಎಲ್‌ಸಿಗೆ ನ. 30ರ ವರೆಗೆ ನೀರು ಬಿಡುವುದಾಗಿ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಈಗ ಬೆಂಗಳೂರಿನಲ್ಲಿ ಸಭೆ ನಡೆಸಿ ನ. 10ರ ವರೆಗೆ ಮಾತ್ರ ನೀರು ಬಿಡುವುದಾಗಿ ಹೇಳುತ್ತಿರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗಲಿದೆ. ಮುಖ್ಯಮಂತ್ರಿಗಳು ರೈತರ ವಿಚಾರದಲ್ಲಿ ರಾಜಕೀಯ ಮಾಡದೆ ಜಿಲ್ಲೆಯ ಅನ್ನದಾತರ ಹಿತ ಕಾಯಬೇಕು. ಜಿಂದಾಲ್ ಸೇರಿದಂತೆ ಅನೇಕ ಕೈಗಾರಿಕೆಗಳಿಗೆ ಕೊಡುವ ನೀರನ್ನೇ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 1.50 ಲಕ್ಷ ಎಕರೆ ಮೆಣಸಿನಕಾಯಿ, 1 ಲಕ್ಷ ಎಕರೆ ಭತ್ತ ಸೇರಿ ನಾನಾ ಬೆಳೆಗಳು ನೀರಿಲ್ಲದೆ ಸಂಪೂರ್ಣ ಹಾಳಾಗಲಿವೆ. ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಸಮಸ್ಯೆಯಾಗದಂತೆ ನಿಗಾ ವಹಿಸಬೇಕಾದ ಕಾಳಜಿಯನ್ನು ಸರ್ಕಾರ ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕು. ಈ ಕುರಿತು ಮಾತನಾಡಲು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರಿಗೆ ಕರೆ ಮಾಡಿದೆ. ಸ್ವೀಕರಿಸಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ, ನೀರು ಬಿಡಿಸುವ ಪ್ರಯತ್ನ ಮಾಡಲಾಗುವುದು ಎಂದರು.ರಾಜ್ಯದಲ್ಲಿ ಬರಗಾಲವಿದೆ. ರೈತರು ಬೆಳೆಹಾನಿಗೊಂಡು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಯಾವುದೇ ಸಚಿವರು ರೈತರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ.
ಸಿಎಂ ಸಿದ್ದರಾಮಯ್ಯನವರು ಸೂಚನೆ ನೀಡಿದರೂ ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ದೂರಿದ ಈಶ್ವರಪ್ಪ, ಸಚಿವರುಗಳೇನು ಎಲ್ ಕೆಜಿ ಯುಕೆಜಿ ಮಕ್ಕಳೇ? ಬರಪೀಡಿತ ಪ್ರದೇಶಗಳಿಗೆ ತೆರಳಿ ರೈತರ ಸಂಕಷ್ಟ ಆಲಿಸಲು ಇವರಿಗೇನು ಸಮಸ್ಯೆ ಎಂದು ಆಕ್ರೋಶಗೊಂಡರು.ಬರ ಪರಿಹಾರಕ್ಕೆ ಸಂಬಂಧಸಿದಂತೆ ಪ್ರತಿ ಬಾರಿಯೂ ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸುವ ರಾಜ್ಯ ಸರ್ಕಾರ ಒಂದೇ ಒಂದು ಬಿಡಿಗಾಸು ಈವರೆಗೆ ಬಿಡುಗಡೆ ಮಾಡಿಲ್ಲ. ತಕ್ಷಣ ರಾಜ್ಯ ಸರ್ಕಾರ ಬರಪರಿಹಾರ ನೀಡುವ ಕಾಳಜಿ ತೋರಿಸಲಿ. ಕೇಂದ್ರ ಸರ್ಕಾರ ಬಗ್ಗೆ ವಿನಾಕಾರಣ ಆರೋಪ ಮಾಡುವುದನ್ನು ಬಿಡಲಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಮಾಜಿ ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಬಸವರಾಜ ದಢೋಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ಮುಖಂಡರಾದ ರಾಮಲಿಂಗಪ್ಪ, ಗುತ್ತಿಗೆನೂರು ವಿರೂಪಾಕ್ಷ ಗೌಡ, ಅನಿಲ್ ನಾಯ್ಡು ಸುದ್ದಿಗೋಷ್ಠಿಯಲ್ಲಿದ್ದರು. ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಬರ ಅಧ್ಯಯನಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಬರ ಅಧ್ಯಯನ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಿಲ್ಲೆಯ ಚೆಳ್ಳಗುರ್ಕಿ, ವೀರಾಪುರ, ಕಾರೇಕಲ್, ಶಿಡಗಿನಮೊಳ, ಮೀನಳ್ಳಿ ಸೇರಿದಂತೆ ನಾನಾ ಗ್ರಾಮಗಳಿಗೆ ಭೇಟಿ ನೀಡಿದ ಅಧ್ಯಯನ ತಂಡದ ಸದಸ್ಯರು ರೈತರ ಬೆಳೆಗಳನ್ನು ಪರಿಶೀಲಿಸಿತಲ್ಲದೆ, ರೈತರು ಮಳೆಯಿಲ್ಲದೆ ಎದುರಿಸುತ್ತಿರುವ ಸಮಸ್ಯೆಯನ್ನು ಆಲಿಸಿತು. ಬಳಿಕ ಆಯಾ ಗ್ರಾಮಗಳಿಗೆ ಕುಡಿವ ನೀರು ಸರಬರಾಜು ಮಾಡುವ ಕೆರೆಗಳನ್ನು ವೀಕ್ಷಿಸಿತು.ಇದೇ ವೇಳೆ ರೈತರು, ಕಾಲುವೆಗಳಿಗೆ ನೀರಿಲ್ಲದೆ ಬೆಳೆ ಒಣಗುವ ಸಾಧ್ಯತೆಯಿದ್ದು, ಸಮರ್ಪಕವಾಗಿ ನೀರು ಕೊಡಬೇಕು. ರಾಜ್ಯ ಸರ್ಕಾರ ಬೆಳೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಬಸವರಾಜ ದಢೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಎಸ್. ಗುರುಲಿಂಗನಗೌಡ,ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್‌ಗೌಡ, ಜಿಲ್ಲಾ ಉಪಾಧ್ಯಕ್ಷ ಗಾಳಿ ಶಂಕ್ರಪ್ಪ ಸೇರಿದಂತೆ ರೈತ ಮೋರ್ಚಾ ಪ್ರಮುಖರು ಹಾಗೂ ಪಕ್ಷದ ಜಿಲ್ಲಾ ಮುಖಂಡರು ಇದ್ದರು.