ಶಾಸಕ ಕೋನರಡ್ಡಿ ಹಸಿರು ಟವಲ್‌ ಧರಿಸುವುದು ನಿಲ್ಲಿಸಲಿ

| Published : Oct 08 2024, 01:06 AM IST

ಸಾರಾಂಶ

ರೈತರ ಅಹವಾಲು ಸ್ವೀಕರಿಸುವುದನ್ನು ಬಿಟ್ಟು ಹೋರಾಟಗಾರರು ಕೇವಲ ಮನವಿ ನೀಡಬೇಕು. ಅದನ್ನು ಬಿಟ್ಟು ಬೇರೆ ಏನು ಮಾಡಬಾರದು ಎಂದು ಅವಾಚ್ಯವಾಗಿ ಮಾತನಾಡಿದ್ದಾರೆಂಬ ಆರೋಪ.

ಹುಬ್ಬಳ್ಳಿ:

ನಕಲಿ ರೈತ ಹೋರಾಟಗಾರ ಶಾಸಕ ಎನ್.ಎಚ್. ಕೋನರಡ್ಡಿ ತಮ್ಮ ಹೆಗಲ ಮೇಲೆ ಹಸಿರು ಟವೆಲ್ ಧರಿಸುವುದನ್ನು ಬಿಡಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಣ್ಣಿಗೇರಿ ಪಟ್ಟಣದ ಸರ್ಕಾರಿ ಉಗ್ರಾಣದಲ್ಲಿ ರೈತರು ಕೂಡಿಟ್ಟ ಕಡಲೆ, ಹೆಸರು ಚೀಲಗಳ ನಾಪತ್ತೆಯಾಗಿದ್ದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ವೇಳೆ ಶಾಸಕರು ಅವಾಚ್ಯ ಶಬ್ದಗಳ ಮೂಲಕ ನಿಂದಿಸಿ ರೈತ ಕುಲಕ್ಕೆ ಅವಮಾನ ಮಾಡಿದ್ದಾರೆ. ತಕ್ಷಣವೇ ಕೋನರಡ್ಡಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.ರೈತರನ್ನು ನಿಂದಿಸಿದ ಅವರಿಗೆ ರೈತರ ಹೆಸರು ಬಳಕೆ ಮಾಡುವ ನೈತಿಕತೆ ಉಳಿದಿಲ್ಲ. ಈ ಹಿಂದೆ ಕಳಸಾ ಬಂಡೂರಿ ಹೋರಾಟ ನಡೆದ ವೇಳೆ ಯಮನೂರಿನಲ್ಲಿ ನಡೆದ ಪೊಲೀಸ್ ಗಲಭೆಯಲ್ಲಿ ರೈತರ ಮೇಲೆ ಹಲ್ಲೆ ನಡೆದಾಗ ರೈತರ ಪರ ಎನ್ನುವ ಶಾಸಕರು ಊರು ಬಿಟ್ಟು ಹೋಗಿದ್ದರು. ಇವರೊಬ್ಬ ನಕಲಿ ರೈತ ಹೋರಾಟಗಾರ ಎಂದು ಕಿಡಿಕಾರಿದರು.

ರೈತರ ಅಹವಾಲು ಸ್ವೀಕರಿಸುವುದನ್ನು ಬಿಟ್ಟು ಹೋರಾಟಗಾರರು ಕೇವಲ ಮನವಿ ನೀಡಬೇಕು. ಅದನ್ನು ಬಿಟ್ಟು ಬೇರೆ ಏನು ಮಾಡಬಾರದು ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದ ಅವರು, ಕೋನರಡ್ಡಿ ತಮ್ಮ ಹೆಗಲ ಮೇಲೆ ಹಾಕುವ ಹಸಿರು ಟವಲ್‌ ತೆಗೆಯಬೇಕು, ಇಲ್ಲದೇ ಇದ್ದರೇ ಮುಂದಿನ ದಿನಗಳಲ್ಲಿ ಶಾಸಕರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಈರಪ್ಪ ಕಮಕೊಳ್ಳಿ, ಮುದಕಣ್ಣ ತಿಪ್ಪಣ್ಣವರ, ಫಕೀರಪ್ಪ ಚವರಗಿ ಸೇರಿದಂತೆ ಹಲವರಿದ್ದರು.