ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಹರಿಸಿರುವ ಹಿನ್ನೆಲೆಯಲ್ಲಿ ಹಂಪಿ ಭಾಗದಲ್ಲಿ ಹರಿಗೋಲು ಸವಾರಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಮೀನುಗಾರರು ಈಗ ಬದುಕು ನಡೆಸಲು ಪರದಾಡುವಂತಾಗಿದೆ.ಜಲಾಶಯದಿಂದ ಕಳೆದ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ನೀರು ನದಿಗೆ ಹರಿಸಲಾಗುತ್ತಿದೆ. ಹಂಪಿಯ ಕೋದಂಡರಾಮ ದೇವಾಲಯದ ಬಳಿಯ ಚಕ್ರತೀರ್ಥ ಪ್ರದೇಶದಲ್ಲಿ "ಹರಿಗೋಲು ಪಯಣ "ವನ್ನು 18 ಮೀನುಗಾರರು ನಡೆಸುತ್ತಿದ್ದಾರೆ. ಈ ಮೀನುಗಾರರು 10 ಹರಿಗೋಲುಗಳನ್ನಿಟ್ಟುಕೊಂಡು, ಹಂಪಿ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ ಮಾಡಿಸುತ್ತಿದ್ದಾರೆ. ಆದರೆ, ಈಗ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹರಿಗೋಲು ನಿಲ್ಲಿಸಲಾಗಿದೆ.
ಹರಿಗೋಲು ಪಯಣ ಹೇಗೆ?:ಹಂಪಿಯ ಕೋದಂಡರಾಮ ದೇಗುಲ ಬಳಿಯ ಚಕ್ರತೀರ್ಥ ಪ್ರದೇಶದಿಂದ ಋಷಿಮುಖ ಪರ್ವತದವರೆಗೆ ಹರಿಗೋಲು ಪಯಣ ನಡೆಯಲಿದೆ. ಸ್ಥಳೀಯ ಮೀನುಗಾರರು ದೇಶ, ವಿದೇಶಿ ಪ್ರವಾಸಿಗರನ್ನು ತೆಪ್ಪದಲ್ಲಿ ಕುಳ್ಳಿರಿಸಿಕೊಂಡು 45 ನಿಮಿಷದವರೆಗೆ ಹರಿಗೋಲು ಸವಾರಿ ಮಾಡಿಸುತ್ತಾರೆ. ಒಬ್ಬರಿಗೆ ₹200 ಶುಲ್ಕವಿದೆ. ನದಿಯಲ್ಲಿ ತೆರಳಿ ಸುತ್ತ ಕಲ್ಲುಗುಡ್ಡ, ಮಂಟಪ ಸುತ್ತಿ ಪ್ರವಾಸಿಗರು ವೀಕ್ಷಿಸಿ ಖುಷಿಪಡುತ್ತಾರೆ.
ಶಹಬ್ಬಾಸ್ ಗಿರಿ:ಹಂಪಿಯಲ್ಲಿ ಕಳೆದ ವರ್ಷ ನಡೆದ ಜಿ-20 ಶೃಂಗಸಭೆ ವೇಳೆ ವಿದೇಶಿ ರಾಯಭಾರಿಗಳು, ಪ್ರತಿನಿಧಿಗಳನ್ನು ಹರಿಗೋಲು ಸವಾರಿ ಮಾಡಿಸಿ ಈ ಮೀನುಗಾರರು ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ. ಹರಿಗೋಲು ಸೇವೆ ಕುರಿತು ವಿದೇಶಿ ರಾಯಭಾರಿಗಳು ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ದೇಶ, ವಿದೇಶಿ ಪ್ರವಾಸಿಗರು ಹರಿಗೋಲು ಸವಾರಿಯತ್ತ ಆಕರ್ಷಿತರಾಗಿದ್ದರು. ಆದರೆ, ಈಗ ನದಿಗೆ ನೀರು ಬಿಟ್ಟಿರುವುದರಿಂದ ಬೇರೆ ದಾರಿ ಕಾಣದೇ ನೀರಿನ ಹರಿವು ಕಡಿಮೆ ಆಗುವುದನ್ನೇ ಈ ಮೀನುಗಾರರು ಎದುರು ನೋಡುತ್ತಿದ್ದಾರೆ.
ಹಂಪಿಯ ಚಕ್ರತೀರ್ಥದ ಬಳಿ ಹರಿಗೋಲು ಸೇವೆ ನೀಡುವುದಕ್ಕೆ ಬುಕ್ಕಸಾಗರ ಗ್ರಾಪಂ ಹರಾಜು ಹಾಕಿದೆ. ವಾರ್ಷಿಕ ₹10 ಲಕ್ಷಕ್ಕೆ ಈ ಹರಾಜು ಗುತ್ತಿಗೆಯನ್ನು ಮೀನುಗಾರರು ಪಡೆದಿದ್ದಾರೆ. ಆದರೆ, ಈಗ ನದಿಗೆ ನೀರು ಬಿಟ್ಟಿರುವುದರಿಂದ ಮೀನುಗಾರರು ಕೂಡ ಆತಂಕಗೊಂಡಿದ್ದಾರೆ. ಒಂದು ವೇಳೆ ತುಂಗಭದ್ರಾ ಜಲಾಶಯದಲ್ಲಿ ನಿರಂತರ ಒಳಹರಿವು ಇದ್ದರೆ ನದಿಗೆ ನೀರು ಹರಿಸಲಾಗುತ್ತದೆ. ಇದರಿಂದ ಹರಿಗೋಲು ಸೇವೆಯೂ ಬಂದ್ ಆಗಲಿದೆ. ಇದರಿಂದ ನಮಗೆ ಭಾರೀ ಪ್ರಮಾಣದಲ್ಲಿ ಹಾನಿ ಆಗಲಿದೆ ಎನ್ನುತ್ತಾರೆ ಮೀನುಗಾರರು.ರಕ್ಷಣೆಗೆ ಧಾವಿಸುವ ಮೀನುಗಾರರು:
ಹಂಪಿಯ ತುಂಗಭದ್ರಾ ನದಿಯಲ್ಲಿ ಯಾರಾದರೂ ಆಯತಪ್ಪಿ ಬಿದ್ದರೆ ತಕ್ಷಣವೇ ಲೈಫ್ ಜಾಕೆಟ್ ಧರಿಸಿ ಈ ಮೀನುಗಾರರು ಆಪದ್ಬಾಂಧವರಂತೆ ರಕ್ಷಣೆಗೆ ಧಾವಿಸುತ್ತಾರೆ. ಹಲವು ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ. ಇನ್ನು ಮೈಲಾರ ಜಾತ್ರೆ ವೇಳೆ ಮೈಲಾರಕ್ಕೆ ತೆರಳಿ ರಕ್ಷಣೆ ನೀಡುತ್ತಾರೆ.ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹರಿಗೋಲು ಹಾಕಲು ಆಗುತ್ತಿಲ್ಲ. ಹರಾಜಿನಲ್ಲಿ ಹರಿಗೋಲು ಸೇವೆ ಗುತ್ತಿಗೆ ಪಡೆದಿದ್ದು, ಹಾನಿಯಾಗುವ ಆತಂಕವಿದೆ. ಕಳೆದ ವಾರದಿಂದ ಒಂದು ರುಪಾಯಿ ದುಡಿಮೆ ಆಗಿಲ್ಲ. ನೀರು ಕಡಿಮೆ ಆಗುವುದನ್ನು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ಹಂಪಿಯ ಮೀನುಗಾರ ಎಲ್.ಪೀರು ನಾಯ್ಕ.