ಹುಬ್ಬಳ್ಳಿಯಲ್ಲಿ ಸ್ಥಗಿತಗೊಂಡಿದ್ದ ಫ್ಲೈಓವರ್‌ ಕಾಮಗಾರಿ ಪುನರಾರಂಭ

| Published : Jan 24 2025, 12:47 AM IST

ಹುಬ್ಬಳ್ಳಿಯಲ್ಲಿ ಸ್ಥಗಿತಗೊಂಡಿದ್ದ ಫ್ಲೈಓವರ್‌ ಕಾಮಗಾರಿ ಪುನರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ವರ್ಷದಿಂದ ಫ್ಲೈಓವರ್‌ ಕಾಮಗಾರಿ ನಡೆಯುತ್ತಿದೆ. ಸೆ.10ರಂದು ಇಲ್ಲಿನ ಹಳೇ ಕೋರ್ಟ್‌ ಸರ್ಕಲ್‌ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸೇತುವೆ ಕೆಳಗೆ ಬೈಕ್‌ ಮೇಲೆ ತೆರಳುತ್ತಿದ್ದ ಪಿಎಸ್‌ಐ ನಾಭಿರಾಜ ದಯಣ್ಣವರ ತಲೆ ಮೇಲೆ ಕಬ್ಬಿಣದ ರಾಡ್‌ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ಹುಬ್ಬಳ್ಳಿ:

ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಎಎಸ್‌ಐ ಬಲಿ ಪಡೆದಿದ್ದ ಇಲ್ಲಿನ ಫ್ಲೈಓವರ್‌ ಕಾಮಗಾರಿ ಎರಡು ದಿನಗಳ ಹಿಂದೇ ಶುರುವಾಗಿದ್ದು ಇದೀಗ ಮುಂಜಾಗ್ರತಾ ಕ್ರಮಕೈಗೊಂಡು ಕಾಮಗಾರಿ ಆರಂಭಿಸಲಾಗಿದೆ. ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಎರಡು ವರ್ಷದಿಂದ ಫ್ಲೈಓವರ್‌ ಕಾಮಗಾರಿ ನಡೆಯುತ್ತಿದೆ. ಸೆ.10ರಂದು ಇಲ್ಲಿನ ಹಳೇ ಕೋರ್ಟ್‌ ಸರ್ಕಲ್‌ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸೇತುವೆ ಕೆಳಗೆ ಬೈಕ್‌ ಮೇಲೆ ತೆರಳುತ್ತಿದ್ದ ಪಿಎಸ್‌ಐ ನಾಭಿರಾಜ ದಯಣ್ಣವರ ತಲೆ ಮೇಲೆ ಕಬ್ಬಿಣದ ರಾಡ್‌ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗೆ ದಾಖಲಿಸಿದರೂ ಫಲಕಾರಿಯಾಗದೆ ಮೃತರಾಗಿದ್ದರು. ಈ ಹಿನ್ನೆಲೆ ಫ್ಲೈಓವರ್‌ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಝಂಡು ಕಂಪನಿಯ 19 ಜನರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು. ಇನ್ನುಳಿದ ಕೆಲಸಗಾರರು, ಎಂಜಿನಿಯರ್‌ ಓಡಿ ಹೋಗಿದ್ದರು. ಆಗಿನಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕೈಗೊಂಡಿರುವ ಕುರಿತು ಕೇಳಿದಾಗ ಕಾಮಗಾರಿ ಪ್ರಾರಂಭಿಸಲು ಝಂಡು ಕಂಪನಿ ಹಿಂಜರಿದಿತ್ತು. ಇದೀಗ ಕಳೆದ 2 ದಿನಗಳಿಂದ ಕೆಲಸ ಪುನಾರಂಭಿಸಲಾಗಿದೆ.

ಮುಂಜಾಗ್ರತಾ ಕ್ರಮ:

ಪಿಎಸ್‌ಐ ಸಾವಿನ ನಂತರ ಮುಂಜಾಗ್ರತಾ ಕ್ರಮಕೈಗೊಂಡಿರುವ ಝಂಡು ಕಂಪನಿ, ಕಾಮಗಾರಿ ನಡೆಯುತ್ತಿರುವ ಹಳೇ ಕೋರ್ಟ್‌ ಸರ್ಕಲ್‌ ಬಳಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಿಸಿದೆ. ಜತೆಗೆ ಸುತ್ತಲೂ ಹಸಿರು ಬಣ್ಣದ ಬಟ್ಟೆ ಅಳವಡಿಸಿ ಆಗಮನ ಹಾಗೂ ನಿರ್ಗಮನ ನಿಷೇಧಿಸಲಾಗಿದೆ.

ಇನ್ನಾದರೂ ಯಾವುದೇ ಅವಘಡ ನಡೆಯದಂತೆ ಕ್ರಮಕೈಗೊಂಡು ಗುತ್ತಿಗೆ ಪಡೆದ ಕಂಪನಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.