ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಬಸವ ನಾಡು ವಿಜಯಪುರದಲ್ಲಿ ಅಕ್ರಮ ಪಿಸ್ತೂಲ್, ಬಂದೂಕುಗಳ ಸದ್ದಿಗೆ ಪೊಲೀಸರು ಅಲ್ಲಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಕಳೆದ 5 ದಶಕಗಳಿಂದ ಅದೆಲ್ಲೋ ತಯಾರಾಗುವ ಕಂಟ್ರಿಮೇಡ್ ಪಿಸ್ತೂಲ್‌ಗಳು ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಸದ್ದು ಮಾಡಿದ್ದೇ ಹೆಚ್ಚು. ಭೀಮಾತೀರದ ಚಂದಪ್ಪ ಹರಿಜನ, ಪುತ್ರಪ್ಪ ಸಾಹುಕಾರ ಭೈರಗೊಂಡ, ಮಲ್ಲಿಕಾರ್ಜುನ ಚಡಚಣನ ಕಾಲದಿಂದಲೇ ಶುರುವಾದ ಕಂಟ್ರಿ ಪಿಸ್ತೂಲ್‌ಗಳ ಸದ್ದು ಬಾಗಪ್ಪ ಹರಿಜನನ ಅಂತ್ಯದವರೆಗೂ ಶಬ್ದ ಮಾಡುತ್ತಲೇ ಇವೆ.
ಕಳೆದ ತಿಂಗಳು ನಡೆದ ಕೊಲೆಯೊಂದರಲ್ಲಿ ಅಕ್ರಮ ಪಿಸ್ತೂಲ್ ಬಳಕೆಯಾಗಿದ್ದರ ಜಾಡು ಹಿಡಿದು ಹೊರಟ ವಿಜಯಪುರ ಜಿಲ್ಲಾ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಕಳೆದ ಆರೇಳು ವರ್ಷಗಳಿಂದ ಮಧ್ಯಪ್ರದೇಶದಿಂದ ಲಕ್ಷ, ಒಂದೂವರೆ ಲಕ್ಷಕ್ಕೆಲ್ಲ ಪಿಸ್ತೂಲುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಜಾಲವೇ ಪತ್ತೆಯಾಗಿದೆ. ಹೀಗೆ ಸಾಗರ ರಾಠೋಡ ಎಂಬ ಆರೋಪಿಯನ್ನು ಬೆಂಡೆತ್ತಿದ ಪೊಲೀಸರಿಗೆ ಆತನೇ ಬಾಯ್ಬಿಟ್ಟಂತೆ ಜಿಲ್ಲೆಯಲ್ಲಿ ಬರೋಬ್ಬರಿ 10 ಪಿಸ್ತೂಲ್‌ಗಳನ್ನು ಅಕ್ರಮವಾಗಿ ಸರಬರಾಜು ಮಾಡಿದ್ದಾನೆ. ಅದರ ಬೆನ್ನಟ್ಟಿದ ಪೊಲೀಸರು 10 ಆರೋಪಿಗಳನ್ನು ಬಂಧಿಸಿ ಅವರಿಂದ 10 ಪಿಸ್ತೂಲ್ ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.ಹಿಂದೆಯೂ ನಡೆದಿತ್ತು ಮೆಗಾ ಆಪರೇಷನ್: 2017 ಅಕ್ಟೋಬರ್ 14ರಂದು ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಜಾಲಾಡಿದ ಖಾಕಿಗಳು ಆಗ 12 ಆರೋಪಿಗಳನ್ನು ಬಂಧಿಸಿ ಅವರಿಂದ 20 ಕಂಟ್ರಿ ಪಿಸ್ತೂಲ್ ಹಾಗೂ 49 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಉತ್ತರ ವಲಯ ಐಜಿಪಿ ಆಗಿದ್ದ ರಾಮಚಂದ್ರರಾವ ಹಾಗೂ ಅಂದಿನ ಎಸ್‌ಪಿ ಕುಲದೀಪ ಜೈನ್ ಅವರು ಮಧ್ಯಪ್ರದೇಶಕ್ಕೆ ತಂಡಗಳನ್ನು ಕಳಿಸಿ ಜಾಲಾಡಿ ಈ ಅಕ್ರಮವನ್ನು ಬುಡಸಮೇತ ಕಿತ್ತಾಕುವ ಭರವಸೆ ನೀಡಿದ್ದರು. ನಂತರದಲ್ಲಿ ಬಂದ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಸಿಕ್ಕಷ್ಟು ಪಿಸ್ತೂಲ್ ವಶಪಡಿಸಿಕೊಳ್ಳುತ್ತಿದ್ದಾರೆ. ಮಧ್ಯಪ್ರದೇಶದಿಂದ ಲಾರಿ ಚಾಲಕರ ಮೂಲಕ ಬಂದು ಜಿಲ್ಲೆ ಸೇರುವ ಅಕ್ರಮ ಶಸ್ತ್ರಾಸ್ತ್ರಗಳ ದಂಧೆಗೆ ಕಡಿವಾಣ ಹಾಕಿದರೆ ಜಿಲ್ಲೆಯಲ್ಲಿ ನಡೆಯುವ ಅಪರಾಧಗಳು ಕಡಿಮೆಯಾಗಬಹುದಾಗಿದೆ.ಗುಂಡಿನ ಸದ್ದು ನಿಲ್ಲೋದ್ಯಾವಾಗ?:
ಜಿಲ್ಲೆಯ ಕೆಲ ಪುಡಿರೌಡಿಗಳು, ಅಕ್ರಮ ದಂಧೆಕೋರರು ಸೇರಿದಂತೆ ಅನೇಕರು ಕಂಟ್ರಿ ಪಿಸ್ತೂಲ್‌ಗಳನ್ನು ಹೊಂದಿರುವುದು ಸಾಕಷ್ಟು ಸಾರಿ ಬೆಳಕಿಗೆ ಬಂದಿದೆ. ಅನೇಕ ವರ್ಷಗಳಿಂದ ಆಗಾಗ ಮೊಳಗುತ್ತಲೇ ಇರುವ ಗುಂಡಿನ ಸದ್ದಿಗೆ ಕೊನೆ ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಸಲೀಸಾಗಿ ಅಕ್ರಮ ಪಿಸ್ತೂಲ್‌ಗಳು ನುಗ್ಗುತ್ತವೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಮಧ್ಯಪ್ರದೇಶದಿಂದ ಲಾರಿಗಳಲ್ಲಿ ಬರುವ ಅಕ್ರಮ ಶಸ್ತ್ರಾಸ್ತ್ರಗಳು ಜಿಲ್ಲೆಯನ್ನು ಸೇರುತ್ತಿವೆ ಎಂದೂ ಹೇಳಲಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ದಾಳಿ ಮಾಡುವ ಪೊಲೀಸರು ಅಕ್ರಮ ಶಸ್ತ್ರಾಸ್ತ್ರಗಳು ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳುತ್ತಾರೆ.
-------------ಕೋಟ್ಆರೋಪಿಯೊಬ್ಬನ ಬಂಧನದ ಬಳಿಕ ಆತ ಕಳೆದ ಐದಾರು ವರ್ಷಗಳಲ್ಲಿ ಅಕ್ರಮವಾಗಿ ಪೂರೈಸಿದ್ದ ಪಿಸ್ತೂಲ್‌ಗಳನ್ನು ಹಾಗೂ ಅವುಗಳನ್ನು ಹೊಂದಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆತನಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಮಧ್ಯಪ್ರದೇಶದಿಂದ ಲಾರಿಗಳಲ್ಲಿ ತಂದಿರುವ ಮಾಹಿತಿ ಇರುವುದರಿಂದ ಅದೆಲ್ಲವನ್ನೂ ಜಾಲಾಡಿ, ಬಸವ ನಾಡನ್ನು ಬಂದೂಕು ಮುಕ್ತ ಮಾಡಲು ಪೊಲೀಸ್ ಇಲಾಖೆ ಪಣ ತೊಟ್ಟಿದೆ.
- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.