ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಈ ಗ್ಯಾರಂಟಿಗಳಿಗೆ ಹಣವನ್ನು ಹೊಂದಿಸಲು ನಿರ್ಗತಿಕರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಇಂತಹ ಸಾಮಾಜಿಕ ಜನೋಪಯೋಗಿ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೀಡುವ ಮಾಸಾಶಸ ನಿಲ್ಲಿಸಿದೆ. ಇದರಿಂದ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳು ಕಂಗಾಲಾಗಿದ್ದಾರೆ. ಇದು ಬಡವರಿಗೆ ಎಸಗುತ್ತಿರುವ ಅನ್ಯಾಯ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 21,014 ಜನ ಫಲಾನುಭವಿಗಳಿಗೆ ಕಳೆದ 5-6 ತಿಂಗಳಿನಿಂದ ಮಾಸಾಶನ ನಿಂತುಹೋಗಿದೆ. ಬಡವರ ಬದುಕನ್ನು ಕಸಿದುಕೊಂಡ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2 ಸಾವಿರವನ್ನು ಹಾಕದೇ ಚುನಾವಣೆಯ ಸಂದರ್ಭದಲ್ಲಿ 2, 3 ತಿಂಗಳ ಹಣವನ್ನು ಒಮ್ಮೆಗೆ ಹಾಕಿ ಮತದಾರರನ್ನು ಆಸೆ, ಆಮಿಷಗಳಿಗೆ ಒಳಪಡಿಸುತ್ತೀರುವುದು ಸರಿಯಲ್ಲ ಎಂದರು.
ಚನ್ನಗಿರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ, ಬೆಳೆನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರವನ್ನು ಕೊಡಬೇಕು. ರೈತರ ಸಾಲವನ್ನು ಮನ್ನಾ ಮಾಡಬೇಕು. ತಾಲೂಕುಮಟ್ಟದ ಕೆಡಿಪಿ ಸಭೆಗಳನ್ನು ಯಾವ ಕಾರಣಕ್ಕೆ ಸಭೆ ನಡೆಸುತ್ತಿಲ್ಲ? ಅಕ್ರಮ ಜೂಜಾಟ ಚನ್ನಗಿರಿ ತಾಲೂಕಿನಲ್ಲಿ ಕೊನೆಯಾಗಬೇಕು ಎಂದು ಸರ್ಕಾರವನ್ನು ಎಚ್ಚರಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳು ಡಿ.ಸಿ.ಕುಮಾರಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೆಬೆನ್ನೂರು ಬಸವರಾಜ್, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಗೇನಹಳ್ಳಿ ಪಿ.ಲೋಹಿತ್ ಕುಮಾರ್, ಪುರಸಭೆ ಮಾಜಿ ಸದಸ್ಯ ಪಟ್ಲಿ ನಾಗರಾಜ್ ಇತರರಿದ್ದರು.
- - -
-21ಕೆಸಿಎನ್‌ಜಿ1: