ಲೋಕ ಅರ್ಥ ಮಾಡಿಕೊಳ್ಳಲು ಕತೆಗಳು ಬೇಕು: ನಾಗಭೂಷಣ್‌

| Published : Mar 04 2024, 01:16 AM IST

ಲೋಕ ಅರ್ಥ ಮಾಡಿಕೊಳ್ಳಲು ಕತೆಗಳು ಬೇಕು: ನಾಗಭೂಷಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮಿ ಪೊನ್ನಾಚಿಯ ದಾರಿ ತಪ್ಪಿಸುವ ಗಿಡ ಮತ್ತು ಕಾಡು ಹುಡುಗನ ಹಾಡುಪಾಡು ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರನಾವು ಕತೆ ಕಟ್ಟಿಕೊಳ್ಳದೇ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಲೋಕ ಅರ್ಥಮಾಡಿಕೊಳ್ಳಲು ಕತೆಗಳು ಬೇಕು ಎಂದು ಮೈಸೂರಿನ ಪ್ರಸಿದ್ಧ ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಹೇಳಿದರು,

ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ಪೊನ್ನಾಚಿ ಅವರ ದಾರಿ ತಪ್ಪಿಸುವ ಗಿಡ ಮತ್ತು ಕಾಡು ಹುಡುಗನ ಹಾಡುಪಾಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬದುಕಿನಲ್ಲಿ ಯಾವುದು ತಾರ್ಕಿಕವಾದುದಲ್ಲ, ಯಾವುದು ಅರ್ಥಪೂರ್ಣವಾದುದವಲ್ಲ, ಯಾವಾಗ ಏನಾಗುತ್ತೊ ಗೊತ್ತಿಲ್ಲ, ನಾವು ಅಂದುಕೊಂಡಿದ್ದು ಲಕ್ಷ ಸಂಗತಿಯಿದ್ದರೆ ಆದದ್ದು ಒಂದೋ ಎರಡು, ನಮಗೆ ಯಾವುದೇ ಶಕ್ತಿ ಇಲ್ಲದಿದ್ದರೂ ಇರುವಂತೆ ನಟಿಸುತ್ತೇವೆ ಎಂದರು.ನಾವು ಕಾಣುವ ಲೋಕ ಒಬ್ಬರಿಗೆ ಒಂದೊಂದು ರೀತಿ ಕಾಣುತ್ತದೆ, ದೊಡ್ಡ ಅಸಂಬಂಧ ಕಂತೆ, ಕತೆ ಇಲ್ಲದೆ ಏನು ಅರ್ಥವಾಗುವುದಿಲ್ಲ, ಕತೆಯ ಮೂಲಕ ಚೌಕಟ್ಟನ್ನು ಕಟ್ಟಿಕೊಂಡು ಲೋಕ ಅರ್ಥ ಮಾಡಿಕೊಳ್ಳಬಹುದು, ಕತೆಗಳ ರೂಪದಲ್ಲಿ ಲೋಕವನ್ನು ಕಟ್ಟಬಹುದು ಇವು ಸಾಮಾನ್ಯರಲ್ಲಿ ಅರಿವು ಮೂಡಿಸುತ್ತದೆ ಕತೆ ಕಟ್ಟುವುದು ಬಿಲ್ಡಿಂಗ್ ಕಟ್ಟುವುದು ಕಷ್ಟ, ಅದು ಸುಲಭವಲ್ಲ, ಕತೆ ಎನ್ನುವುದು ಲೋಕವನ್ನು ಅರ್ಥಮಾಡಿಕೊಳ್ಳಲು ಇರುವ ಒಂದು ವಿಧಾನ ಎಂದರು.

ಇಂಗ್ಲಿಷ್‌ ಭ್ರಮೆಯಿಂದ ನಾವು ಹೊರಬರಬೇಕು. ಇಂಗ್ಲಿಷ್ ಅನ್ನ ಕೊಡುವ ಭಾಷೆಯಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ಕನ್ನಡ ಹೆಚ್ಚು ಉಳಿದಿರೋದೆ ತುಂಗಾಭದ್ರ ನದಿಯಿಂದ ಮೇಲೆ, ಚಾಮರಾಜನಗರದಂತಹ ಗಡಿ ಭಾಗದಲ್ಲಿ ಮಾತ್ರ, ಇಲ್ಲಿ ಇಂಗ್ಲಿಷ್‌ ಗಾಳಿ ಇಲ್ಲ, ಜೊತೆಗೆ ಬಡವರು ಸ್ವಲ್ಪ ಹೆಚ್ಚು ಶಿಕ್ಷಣ ಪಡೆದರೆ ಕನ್ನಡವನ್ನು ಮರೆಯುತ್ತೇವೆ ಇದು ಆಗಬಾರದು ಎಂದರು.

ಕನ್ನಡ ಹೆಚ್ಚು ತಿಳಿದವರೇ ಇಂದು ಕನ್ನಡಕ್ಕೆ ಅಡ್ಡಗೋಡೆಯಾಗಿದ್ದಾರೆ, ಕನ್ನಡ ಓದುವ, ಬರೆಯುವವರ ಸಂಖ್ಯೆ ಹೆಚ್ಚಾಗಬೇಕು, ಗಡಿ ಭಾಗದ ಕನ್ನಡದ ಭಾಷೆಯ ಸೊಗಡನ್ನು ಹೆಚ್ಚು ಉಪಯೋಗಿಸಿ ಸ್ವಾಮಿ ಪೊನ್ನಾಚಿ ಕತೆಗಳನ್ನು ಬರೆದಿದ್ದಾರೆ, ಮುಂದೆ ನೀವು ಗ್ರಂಥವನ್ನು ಬರೆಯಿರಿ ಎಂದರು.

ಜಿಲ್ಲೆ ಕತೆಗಳ ಕಣಜ:

ಸಮಾರಂಭವನ್ನು ಉದ್ಘಾಟಿಸಿದ ಪ್ರಸಿದ್ದ ಕವಿ, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಜಿಲ್ಲೆ ಕತೆಗಳ ಕಣಜ, ಇಲ್ಲಿ ಸಿಗುವ ಕಥಾ ವಸ್ತುಗಳು ಅತ್ಯಂತ ನೈಜವಾಗಿವೆ ಎಂದರು. ಮಂಟೇಸ್ವಾಮಿ, ಮಹದೇಶ್ವರ ಮಹಾಕಾವ್ಯಗಳ ತವರೂರಲ್ಲಿ ಸ್ವಾಮಿ ಪೊನ್ನಾಚಿ ಭವಿಷ್ಯದ ಕತೆಗಾರರಾಗಿ ಮೂಡಿ ಬಂದಿದ್ದಾರೆ ಇದು ಕತೆಗಳ ಕಾಲ, ಸ್ಪರ್ಧೆಗಳ ಮೂಲಕ ಕತೆಗಳನ್ನು ಹೆಚ್ಚು ಹೆಚ್ಚು ಆಹ್ವಾನಿಸಲಾಗುತ್ತಿದೆ, ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಸ್ವಾಮಿ ಪೊನ್ನಾಚಿ ಒಳ್ಳೆಯ ಕಥಾ ಸಂಕಲವನ್ನು ಚಾಮರಾಜನಗರದ ಭಾಷೆಯ ಸೊಗಡಿನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರ ಎಂದರು.ಪುಸ್ತಕ ಕುರಿತು ಮಾತನಾಡಿದ ಕಥೆಗಾರ ಹನೂರು ಚನ್ನಪ್ಪ, ಸ್ವಾಮಿ ಪೊನ್ನಾಚಿ ಅವರ ದಾರಿ ತಪ್ಪಿಸುವ ಗಿಡ ಮತ್ತು ಕಾಡು ಹುಡುಗನ ಹಾಡುಪಾಡು ಕಥಾ ಸಂಕಲನ ಇಲ್ಲಿನ ಸಾಮಾಜಿಕ ಸ್ಥಿತಿಗತಿಗಳಿಗೆ ಹಿಡಿದ ಕನ್ನಂಡಿಯಂತಿದೆ ಎಂದರು.

ಗದ್ಯದ ಸೌಂದರ್ಯವನ್ನು ಈ ಕಥಾ ಸಂಕಲನ ಹೊಂದಿದೆ ಸೃಜನ ಶೀಲತೆಯನ್ನು ಉಳಿಸಿಕೊಂಡು, ಓದಿಸಿಕೊಂಡು ಹೋಗುತ್ತಿದೆ ಅನುಭವ ಮತ್ತು ಸುತ್ತಮುತ್ತಲಿನ ಪರಿಸರ ಕಥಾ ಸಂಕಲನದ ಮೇಲೆ ಪ್ರಭಾವ ಬೀರಿದೆ, ಕಥಾವಸ್ತು ಸಾಮಾಜಿಕ ಸ್ವಾಸ್ಥತೆ ಮತ್ತು ಸಣ್ಣ ಪ್ರತಿಭಟನೆಯನ್ನು ಬಿಂಬಿಸುವ ಮೂಲಕ, ಕೊನೆಗೆ ನ್ಯಾಯವನ್ನು ಒದಗಿಸಲಾಗಿದ ಎಂದರು. ನಿತ್ಯ ಜೀವನದಲ್ಲಿ ಬರುವ ಘಟನೆಗಳನ್ನು ಕಥಾ ವಸ್ತುವನ್ನಾಗಿ ಮಾಡಿಕೊಂಡು ನೀರು ಕುಡಿದಷ್ಟು, ಬಾಳೆ ಹಣ್ಣು ತಿಂದಷ್ಟು ಕಥೆಗಳನ್ನು ಬರೆದಿದ್ದಾರೆ ಜೊತೆಗೆ ಗದ್ಯ ಸೌಂದರ್ಯಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೈಸೂರಿನ ಪ್ರಸಿದ್ಧ ಲೇಖಕ ಅಬ್ದುಲ್ ರಶೀದ್ ರಾಯಚೂರಿನ ಆರೀಪ್‌ ರಾಜಾ, ವೈಷ್ಣವಿ ಪ್ರಕಾಶನದ ಮುದಿರಾಜ್, ಬೆಂಗಳೂರು ಅಮೂಲ್ಯ ಪುಸ್ತಕ ಪ್ರಕಾಶನದ ಕೃಷ್ಣ ಚಂಗಡಿ ಭಾಗವಹಿಸಿ ಮಾತನಾಡಿದರು. ಕಥೆಗಾರ ಸ್ವಾಮಿ ಪೊನ್ನಾಚಿ ಸ್ವಾಗತಿಸಿ, ಪುಸ್ತಕ ಬಿಡುಗಡೆಗೆ ಸಹರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು.