ಧಾರವಾಡ:

ಯಾಂತ್ರಿಕ ಜೀವನದಲ್ಲಿ ದೀರ್ಘವಾದ ಕಥೆಗಳನ್ನು ಓದುವ ವ್ಯವದಾನ ಯಾರಲ್ಲೂ ಇಲ್ಲ. ಮಿತ ಸಮಯದಲ್ಲಿ ಹೇಳುವ ಕಥೆಗಳೇ ಹೆಚ್ಚು ಜನಪ್ರಿಯ ಎಂದು ಉಪನ್ಯಾಸಕ ಡಾ. ಶ್ರೀಧರ ಹೆಗಡೆ ಭದ್ರನ್‌ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರಕಟಿಸಿದ ಡಾ. ಬಸವರಾಜ ಸಾದರ ಅವರ ಸಂಪಾದನೆಯ ‘ಮಿತ ಸಮಯ’ ಮಹಿಳಾ ಕಥಾ ಸಂಚಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.

ಈ ಕಥಾ ಸಂಕಲನದಲ್ಲಿ ಹತ್ತು ಜನ ಕಥೆಗಾರ್ತಿಯರ ಮಿತ ಸಮಯದಲ್ಲಿ ಓದಿದ ಮತು ಬರೆಯಲ್ಪಟ್ಟ ಕಥೆಗಳು ವಿಭಿನ್ನ ಶೈಲಿಯಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ, ಸಾಮಾಜಿಕ ಸನ್ನಿವೇಶ ಸೆರೆ ಹಿಡಿದು ಸಮಕಾಲೀನ ಸಂದರ್ಭಕ್ಕೆ ಕೈಗನ್ನಡಿಗಳಾಗಿವೆ. ಈ 10 ಕಥೆಗಳಲ್ಲಿ ಬಳಸಿದ ಭಾಷೆ, ನಿರೂಪಣಾ ಶೈಲಿ, ತಂತ್ರಗಾರಿಕೆ ಮನೋಜ್ಞವಾಗಿದೆ. ಎಲ್ಲ ಹತ್ತು ಕಥೆಗಳು ಓದುಗರಲ್ಲಿ ಕುತೂಹಲ ಮೂಡಿಸುತ್ತಿವೆ. ಇಲ್ಲಿ ಕಥೆ ಬರೆಯುವುವರೇ ಕಥೆ ಓದುವುದೇ ಒಂದು ವಿಶಿಷ್ಟತೆ ಇದೆ. ಡಾ. ಬಸವರಾಜ ಸಾದರ ಅವರ ಹೊಸ ಪ್ರಯತ್ನಕ್ಕೆ ಸಂಘದ ಪ್ರೋತ್ಸಾಹ ಮಹತ್ವದ್ದು ಎಂದರು.

ಕೃತಿ ಲೋಕಾರ್ಪಣೆ ಮಾಡಿದ ಡಾ. ಶಾಂತಾ ಇಮ್ರಾಪೂರ ಮಾತನಾಡಿ, ಕನ್ನಡದಲ್ಲಿ ಕಥೆ ಬರೆಯುವಿಕೆಗೆ ನೂರು ವರ್ಷಗಳ ಇತಿಹಾಸವಿದೆ. 50ರ ದಶಕದಲ್ಲಿ ಮಹಿಳೆಯರು ಕೌಟುಂಬಿಕ ಚೌಕಟ್ಟು, ಕುಟುಂಬ ಜೀವನದಲ್ಲಿ ಪಟ್ಟ ಪಾಡುಗಳೇ ಮಿತ ಕಥೆಗಳಾಗಿ ರೂಪಗೊಂಡಿದ್ದವು. ನಂತರ ಬಂದ ಕಥೆಗಳು ಪ್ರಗತಿಶೀಲ ನೆಲೆಗಟ್ಟಿನಲ್ಲಿ ರಚನೆಯಾದವು. ತದನಂತರ ಬಂದ ಕಥೆಗಳು ಹೊಸ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮೂಡಿ ಬಂದಿವೆ. ಈ ದೆಸೆಯಲ್ಲಿ ವೀಣಾ ಶಾಂತೇಶ್ವರ ಅವರಿಂದ ರಚನೆಯಾದ ಕಥೆಗಳು ವೈಚಾರಿಕತೆಯಿಂದ ರಚನೆಯಾದದ್ದು ಕಾಣಬಹುದು. ಹತ್ತು ಜನರ ಕಥೆಗಳು ಮಿತಸಮಯದಲ್ಲಿ ಬರೆದವು ಓದುಗರಲ್ಲಿ ಖಂಡಿತ ಕುತೂಹಲ ಮೂಡಿಸುತ್ತವೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಡಾ. ಬಸವರಾಜ ಸಾದರ ಅವರದು ಸೃಜನಶೀಲ ಮನಸ್ಸು. ಇಂದು ಮಹಿಳೆಯರು ಮಿತ ಸಮಯದ ಕಥೆಗಳನ್ನು ವಿಭಿನ್ನ ಶೈಲಿಯಲ್ಲಿ ಬರೆಯುತ್ತಿರುವುದು ಶ್ಲಾಘನೀಯ ಎಂದರು.

ಡಾ. ಬಸವರಾಜ ಸಾದರ ತಮ್ಮ ತಾಯಿಯ ಸ್ಮರಣೆಯ ಈ ಮಿತಸಮಯ ಮಹಿಳಾ ಕಥಾ ಸಂಚಯ ಕುರಿತು ಮಾತನಾಡಿದರು. ಸತೀಶ ತುರಮರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿ, ವಂದಿಸಿದರು. ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ತೇಜಸ್ವಿ ಕಟ್ಟೀಮನಿ, ಡಾ. ಕೆ.ಆರ್. ದುರ್ಗಾದಾಸ, ಡಾ. ಮೃತ್ಯುಂಜಯ ಶೆಟ್ಟರ, ಡಾ. ಪ್ರಕಾಶ ಭಟ್, ಡಾ. ಚಿದಾನಂದ ಮಾಸನಕಟ್ಟಿ, ಜಿ.ಎ. ತಿಗಡಿ, ಪ್ರಕಾಶ ಮಲ್ಲಿಗವಾಡ, ಶಿವಾನಂದ ಅಮರಶೆಟ್ಟಿ, ಪಂಕಜಾ ದೇವಮಾನೆ, ಪ್ರಕಾಶ ಕಡಮೆ, ಚೇತನ ನಾಯಕ, ನಿರ್ಮಲಾ ಶೆಟ್ಟರ, ಡಾ. ಪ್ರಜ್ಞಾ ಮತ್ತಿಹಳ್ಳಿ, ನಿಂಗಪ್ಪ ಮಾಯಕೊಂಡ ಸೇರಿದಂತೆ ಮುಂತಾದವರಿದ್ದರು.