ಬಿರುಗಾಳಿ ಮಳೆಗೆ ತೋಟ, ಮನೆಗಳಿಗೆ ಭಾರೀ ಹಾನಿ

| Published : Jul 28 2024, 02:03 AM IST

ಸಾರಾಂಶ

ಒಮ್ಮೇಲೆ ಬೀಸಿದ ಬಿರುಗಾಳಿಯ ರಭಸಕ್ಕೆ ಸಾವಿರಾರು ಅಡಕೆ ಮರಗಳು ಕತ್ತರಿಸಿ ಬಿದ್ದಿದೆ. ಕೆಲವರ ಮನೆ ಸಂಪೂರ್ಣ ಬಿದ್ದು ಹೋದರೆ, ಮನೆಗಳ ಚಾವಣಿ ಹಾರಿ ಹೋಗಿದೆ.

ಭಟ್ಕಳ: ಶುಕ್ರವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಹಾಡವಳ್ಳಿಯ ಹೀರೆಬೀಳು ಗ್ರಾಮದಲ್ಲಿ ಅಡಕೆ ತೋಟ ಹಾಗೂ ಮನೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಒಮ್ಮೇಲೆ ಬೀಸಿದ ಬಿರುಗಾಳಿಯ ರಭಸಕ್ಕೆ ಸಾವಿರಾರು ಅಡಕೆ ಮರಗಳು ಕತ್ತರಿಸಿ ಬಿದ್ದಿದೆ. ಕೆಲವರ ಮನೆ ಸಂಪೂರ್ಣ ಬಿದ್ದು ಹೋದರೆ, ಮನೆಗಳ ಚಾವಣಿ ಹಾರಿ ಹೋಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಆಗಿಲ್ಲ. ಬಿರುಗಾಳಿಯನ್ನು ಕಂಡಾರೆ ಕಂಡ ಹಾಡವಳ್ಳಿಯ ಹಿರೇಬೀಳುವಿನ ಜನರು ಶನಿವಾರ ಘಟನೆ ವಿವರಿಸುವಾಗ ಭಯಭೀತರಾಗಿರುವುದು ಕಂಡುಬಂತು. ಇಂತಹ ಹಾನಿ ಆಗುತ್ತದೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

ಹೀರೇಬೀಳುವಿನ ಮಂಜುನಾಥ ಕುಪ್ಪಯ್ಯ ನಾಯ್ಕ ಅವರ ಅಡಕೆ ತೋಟ ಹಾಗೂ ತೆಂಗಿನ ತೋಟದಲ್ಲಿದ್ದ ಹಲವಾರು ಮರಗಳು ಗಾಳಿಗೆ ತುಂಡಾಗಿ ಬಿದ್ದಿದ್ದು, ತೀವ್ರ ಹಾನಿಯಾಗಿದೆ. ಹಲ್ಯಾಣಿಯ ತಿಮ್ಮಯ್ಯ ನಾರಾಯಣ ನಾಯ್ಕ ಅವರ ಮನೆ ಪೂರ್ಣ ಕುಸಿದು ಹಾನಿಯಾಗಿದೆ. ಬುಡ್ಡ ಮಂಗಳ ಗೊಂಡ ಅವರ ತೋಟದಲ್ಲಿ ಅಡಕೆ ಮರಗಳು ಉರುಳಿದ್ದರೆ, ಮನೆ ಸಂಪೂರ್ಣ ಹಾನಿಯಾಗಿದೆ. ಅಣ್ಣಪ್ಪ ನಾರಾಯಣ ನಾಯ್ಕ, ಗಣಪತಿ ನಾರಾಯಣ ನಾಯ್ಕ ಮತ್ತು ನಾಗೇಶ ನಾರಾಯಣ ನಾಯ್ಕ ಎನ್ನುವ ಸಹೋದರರ ಮನೆಗಳು ಸಂಪೂರ್ಣ ಹಾನಿಯಾಗಿದ್ದಲ್ಲದೇ ತೋಟದಲ್ಲಿರುವ ಅಡಕೆ ಮರಗಳು ತುಂಡು ತುಂಡಾಗಿ ಬಿದ್ದಿದೆ.

ಹೀರೇಬೀಳುವಿನ ದೇವರಾಜ ದುರ್ಗಯ್ಯ ಗೊಂಡ, ದುರ್ಗಯ್ಯ ಸುಕ್ರ ಗೊಂಡ, ಹಡೀಲ ಗ್ರಾಮದ ಮಳ್ಳಿ ಕೊರಗ ಗೊಂಡ ಹಾಗೂ ಹದ್ಲೂರ ಗ್ರಾಮದ ಮಂಗಳ ಗೊಂಡ ಅವರ ಮನೆಗೆ ಹಾನಿಯಾಗಿದೆ. ಶಿರಾಲಿ- ೧ ಗ್ರಾಮದ ಪಾರ್ವತಿ ಸುಕ್ರಯ್ಯ ದೇವಡಿಗ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಯಲ್ವಡಿಕವೂರಿನ ನಾರಾಯಣ ಸಣ್ಣು ಗೊಂಡ ಅವರ ಮನೆಯ ಚಾವಣಿ ಸಂಪೂರ್ಣ ಹಾರಿಹೋಗಿದೆ.

ಕರಿಕಲ್ ಗ್ರಾಮದ ಗೋಯ್ದಮ್ಮ ತಿಮ್ಮಪ್ಪ ಮೊಗೇರ ಅವರ ಮನೆಯ ಹೆಂಚು ಹಾರಿಹೋಗಿದೆ. ತಲಗೋಡ ಗ್ರಾಮದ ಮಂಜುನಾಥ ಆಚಾರಿ ಎನ್ನುವವರ ಮನೆಗೆ ಹಾನಿಯಾಗಿದೆ. ಜಾಲಿ ದೇವಿನಗರದ ಸುಜಾತ ಕೋಂ ಮಂಜುನಾಥ ನಾಯ್ಕ ಅವರ ಮನೆಯ ಚಾವಣಿಯ ಶೀಟ್‌ಗಳು ಹಾರಿ ಹೋಗಿವೆ. ಜಾಲಿ ಸಣ್ಮನೆಯ ಮಾದೇವ ಸೋಮಯ್ಯ ಗೊಂಡ ಅವರ ಮನೆಯ ಮೇಲೆ ಮರ ಬಿದ್ದಿದೆ. ಸ್ಥಳಕ್ಕೆ ನೋಡಲ್ ಅಧಿಕಾರಿ, ಪಿಡಿಒ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.

ಸ್ಥಳಕ್ಕೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ

ಹಾಡವಳ್ಳಿ ಹೀರೇಬೀಳು ಮಜಿರೆಯಲ್ಲಿ ಭಾರೀ ಗಾಳಿ- ಮಳೆಗೆ ಮನೆಗಳು ಹಾಗೂ ಅಡಕೆ, ತೆಂಗು ತೋಟಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿ ಆಗಿರುವ ಹಿನ್ನೆಲೆ ಶನಿವಾರ ಸ್ಥಳಕ್ಕೆ ಮಾಜಿ ಶಾಸಕ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಹಾನಿಯಾದವರಿಗೆ ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ರೈತರು ಹಾನಿಯ ಬಗ್ಗೆ ಮಾಜಿ ಶಾಸಕರಿಗೆ ವಿವರಿಸಿ ತಮ್ಮ ಅಳಲನ್ನು ತೋಡಿಕೊಂಡರು. ವಿದ್ಯುತ್ ಕಂಬ ನೆಲಕ್ಕುರುಳಿದ್ದರಿಂದ ವಿದ್ಯುತ್ ಸಮಸ್ಯೆ ಉಂಟಾಗಿದ್ದರಿಂದ ಮಾಜಿ ಶಾಸಕರು, ಹೆಸ್ಕಾಂ ಅಧಿಕಾರಿ ಕರೆ ಮಾಡಿ ಶೀಘ್ರ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.