ಬಿರುಗಾಳಿ ಮಳೆಗೆ ಮನೆ, ದೇವಾಲಯಕ್ಕೆ ಹಾನಿ

| Published : Apr 21 2025, 12:53 AM IST

ಸಾರಾಂಶ

ಕಲಾದಗಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ಕಟಾವಿಗೆ ಬಂದಿದ್ದ ಗೋವಿನಜೋಳ ನೆಲಕ್ಕೆ ಉರುಳಿದೆ. ದೇವಸ್ಥಾನವೊಂದರ ಮೇಲೆ ಬೃಹತ್ ಮರಬಿದ್ದು ದೇವಸ್ಥಾನ ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆಯೊಂದು ಉರುಳಿಬಿದ್ದ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಶುಕ್ರವಾರ ರಾತ್ರಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ಕಟಾವಿಗೆ ಬಂದಿದ್ದ ಗೋವಿನಜೋಳ ನೆಲಕ್ಕೆ ಉರುಳಿದೆ. ದೇವಸ್ಥಾನವೊಂದರ ಮೇಲೆ ಬೃಹತ್ ಮರಬಿದ್ದು ದೇವಸ್ಥಾನ ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆಯೊಂದು ಉರುಳಿಬಿದ್ದ ವರದಿಯಾಗಿದೆ.

ರಾತ್ರಿ 9 ಗಂಟೆ ಸುಮಾರಿಗೆ ಏಕಾಏಕಿ ಆರಂಭವಾದ ಬಿರುಗಾಳಿ ಮಳೆಯಿಂದ ಅಂಥ ಭಾರೀ ಪ್ರಮಾಣದ ಹಾನಿ ಸಂಭವಿಸಿಲ್ಲವಾದರೂ ದೇವನಾಳದಲ್ಲಿ ಘಟಪ್ರಭೆಯ ದಂಡೆಯಲ್ಲಿದ್ದ ಬೆಳೆದಿದ್ದ ಗೋವಿನಜೋಳ ನೆಲಕ್ಕುರುಳಿ ಅಪಾರ ಹಾನಿಯಾಗಿದೆ. ಗ್ರಾಮದ ಸಮೀಪದ ಸೈಪೋದ್ದೀನ್‌ ಗುಡ್ಡದ ಕೆಳಭಾಗದಲ್ಲಿರುವ ಪುರಾತನ ಮನಾದಗಿ ಹನುಮಂತ ದೇವರ ದೇವಸ್ಥಾನದ ಮೇಲೆ ಬೃಹತ್ ಬೇವಿನ ಮರ ಉರುಳಿದ ಪರಿಣಾಮ ದೇವಾಲಯ ಸಂಪೂರ್ಣವಾಗಿ ಜಖಂಗೊಂಡಿದ್ದು, ಚಿಕ್ಕಸಂಶಿಯಲ್ಲಿ ಮನೆಯೊಂದು ಬಿದ್ದಿದೆ. ದೇವನಾಳದಲ್ಲಿ ಗೋವಿನಜೋಳದ ಜಮೀನುಗಳಿಗೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಪರಿಶೀಲನೆ ನಡೆಸಿದರು.