ಸಾರಾಂಶ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರಾಂಗಣ ಹಾಗೂ ಒಳಾಂಗಣದಲ್ಲಿ ನೀರು ನಿಂತು ಭಕ್ತರಿಗೆ ಸಮಸ್ಯೆಯಾಗಿತ್ತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ತಾಲೂಕಿನಲ್ಲಿ ಶುಕ್ರವಾರ ಬೆಳಗ್ಗೆ ಗಾಳಿ ಸಹಿತ ಬಿರುಸಿನ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಮೂಲ್ಕಿಯಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕಾಯಿತು.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರಾಂಗಣ ಹಾಗೂ ಒಳಾಂಗಣದಲ್ಲಿ ನೀರು ನಿಂತು ಭಕ್ತರಿಗೆ ಸಮಸ್ಯೆಯಾಗಿತ್ತು. ಮೂಲ್ಕಿ, ಸಸಿಹಿತ್ಲುನಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಸಸಿಹಿತ್ಲು ಗ್ರಾಮದ ಗುಲಾಬಿ ಕೋಟ್ಯಾನ್ ಅವರ ವಾಸ್ಯವ್ಯದ ಮನೆಗೆ ತೆಂಗಿನ ಮರ ಬಿದ್ದು ಮನೆಯ ಮಾಡು ಸಂಪೂರ್ಣ ಕುಸಿದು ತೀವ್ರ ಹಾನಿಯಾಗಿದೆ.
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಕಾರ್ನಾಡ್ ದರ್ಗಾ ರಸ್ತೆಯ ನಿಶಿಭಾಗ್ ಬಳಿಯ ಹನೀಫ್ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಮನೆಯೊಳಗಿದ್ದ ತಾಯಿ, ಇಬ್ಬರು ಮಕ್ಕಳು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಮೆಸ್ಕಾಂಗೆ ನಷ್ಟ ಸಂಭವಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಮೆಸ್ಕಾಂ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಮರ ತೆರವು ಮಾಡಿದರು.ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಕುಂಜೆಯ ಸದಾಶಿವ ಶೆಟ್ಟಿ ಎಂಬವರ ಮನೆಯ ಮಾಡಿನ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹಾನಿಗೀಡಾದ ಸ್ಥಳಕ್ಕೆ ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ದಿನೇಶ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.