ನೂರರ ಸಂಭ್ರಮದಲ್ಲಿ ಸಿದ್ಧಾರೂಢರ ಕಥಾಮೃತ

| Published : Jan 24 2025, 12:46 AM IST

ಸಾರಾಂಶ

ಸಿದ್ಧಾರೂಢರು (1925) ತಮ್ಮ ಶಿಷ್ಯ ಶಿವರಾಮ ಚಂದ್ರಗಿರಿ ಅವರನ್ನು ಎದುರಿಗೆ ಕೂಡಿಸಿಕೊಂಡು ಬರೆಸಿದ ಕೃತಿ ಕಥಾಮೃತವಾಗಿದೆ. ಸಿದ್ಧಾರೂಢರನ್ನು ಕಣ್ಣಾರೆ ಕಾಣಬೇಕೆಂದರೆ ಅವರ ಮಠಕ್ಕೆ ಹೋಗಬೇಕು, ಇಲ್ಲವೇ ಅವರ ಕಥಾಮೃತ ಪಾರಾಯಣ ಮಾಡಬೇಕು ಎಂಬ ಮಾತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಉತ್ತರ ಕರ್ನಾಟಕ ಪ್ರಮುಖ ಆರಾಧ್ಯ ದೈವ ಶ್ರೀಸಿದ್ಧಾರೂಢರ ಮಹಾತ್ಮೆಯನ್ನು ಸಾರುವ, ಲಕ್ಷಾಂತರ ಭಕ್ತರ ಜೀವನ ಹಸನುಗೊಳಿಸಿರುವ "ಶ್ರೀಸಿದ್ಧಾರೂಢ ಕಥಾಮೃತ " ಕೃತಿಗೆ ಇದೀಗ 100ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಹತ್ತಾರು ಕಾರ್ಯಕ್ರಮಗಳು ನಡೆಯಲಿವೆ.

ಶ್ರೀಸಿದ್ಧಾರೂಢರು 1929ರಲ್ಲೇ ಇಹಲೋಕ ತ್ಯಜಿಸಿದರು. ಆದರೆ, ಭಕ್ತರು ಸಿದ್ಧಾರೂಢ ಅಜ್ಜನ ಇರುವಿಕೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಈಗಲೂ ನಂಬಿದ ಭಕ್ತರ ಬದುಕನ್ನು ಹಸನಾಗಿಸುತ್ತಿರುವ ಸದ್ಗುರುಗಳಾಗಿದ್ದಾರೆ. ಇನ್ನು 56 ಅಧ್ಯಾಯಗಳಿರುವ "ಶ್ರೀಸಿದ್ಧಾರೂಢರ ಕಥಾಮೃತ " ಕೃತಿ ರಚಿಸಿದವರು ಅವರ ಶಿಷ್ಯ ಶಿವರಾಮ ಚಂದ್ರಗಿರಿ (ಶಿವದಾಸ). ಸಿದ್ಧಾರೂಢರು (1925) ತಮ್ಮ ಶಿಷ್ಯ ಶಿವರಾಮ ಚಂದ್ರಗಿರಿ ಅವರನ್ನು ಎದುರಿಗೆ ಕೂಡಿಸಿಕೊಂಡು ಬರೆಸಿದ ಕೃತಿ ಇದಾಗಿದೆ. ಸಿದ್ಧಾರೂಢರನ್ನು ಕಣ್ಣಾರೆ ಕಾಣಬೇಕೆಂದರೆ ಅವರ ಮಠಕ್ಕೆ ಹೋಗಬೇಕು, ಇಲ್ಲವೇ ಅವರ ಕಥಾಮೃತ ಪಾರಾಯಣ ಮಾಡಬೇಕು ಎಂಬ ಮಾತಿದೆ. ಬಹುತೇಕ ಭಕ್ತರ ಮನೆಯಲ್ಲೊಂದು ಈ ಕೃತಿ ಇದ್ದೇ ಇರುತ್ತದೆ.

ಸಪ್ತಾಹ ಆಚರಣೆ:

ಅಜ್ಜನ ಭಕ್ತರ ಅಚ್ಚುಮೆಚ್ಚಿನ ಕೃತಿ ಕಥಾಮೃತವಾಗಿದೆ. ಎಷ್ಟನೇ ಮುದ್ರಣ ಎನ್ನುವುದರ ಬಗ್ಗೆ ನಿಖರ ಮಾಹಿತಿ ಮಠದ ಬಳಿಯೂ ಇಲ್ಲ. ಆದರೆ, ಕೃತಿ ರಚನೆಯಾಗಿ ಶತಮಾನ ಕಂಡರೂ ಈಗಲೂ ಹೊಸ ಪುಸ್ತಕದಂತೆ ಪ್ರತಿನಿತ್ಯ ಮಾರಾಟವಾಗುತ್ತಲೇ ಇದೆ. ಶಿವರಾತ್ರಿ, ಶ್ರಾವಣ, ಹಬ್ಬ ಹರಿದಿನ ಹೀಗೆ ವಿಶೇಷ ಸಂದರ್ಭದಲ್ಲಿ ಭಕ್ತರು ಕಥಾಮೃತವನ್ನು ಸಪ್ತಾಹ ಪಾರಾಯಣ ಮಾಡುತ್ತಾರೆ. ಅಂದರೆ ಸೋಮವಾರದಿಂದ ಭಾನುವಾರದ ವರೆಗೆ 56 ಅಧ್ಯಾಯ ಓದಿ ಮುಗಿಸುತ್ತಾರೆ. ಇನ್ನು ಜೀವನದಲ್ಲಿ ಏನೇ ಕಷ್ಟ ಬಂದರೂ ಚರಿತ್ರೆ ಪಾರಾಯಣದ ಸಪ್ತಾಹ ಪಾರಾಯಣ ಮಾಡಿದರೆ ಬಂದ ಕಷ್ಟಗಳೆಲ್ಲ ತಿಳಿಯದಂತೆ ದೂರವಾಗುತ್ತವೆ ಎಂಬ ಮಾತು ಭಕ್ತರದು.

ಐದು ಭಾಷೆಗಳಲ್ಲಿ ಲಭ್ಯ:

ಶ್ರೀಸಿದ್ಧಾರೂಢರ ಕಥಾಮೃತವು ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್‌ ಹಾಗೂ ತೆಲುಗು ಭಾಷೆಗಳಲ್ಲಿ ಸಿಗುತ್ತಿವೆ. ಮೂಲ ಕೃತಿ ಕನ್ನಡದಲ್ಲಿದ್ದರೆ ಇಂಗ್ಲಿಷ್‌ಗೆ ಧಾರವಾಡದ ಪ್ರೊ. ವಾಸನ ಎಂಬುವವರು 12 ವರ್ಷದ ಹಿಂದೆ ಹಾಗೂ 10 ವರ್ಷದ ಹಿಂದೆ ಮರಾಠಿ ಹಾಗೂ ಹಿಂದಿಗೆ ಮೋಹನ ಪೂಜಾರಿ ಭಾಷಾಂತರಿಸಿದ್ದಾರೆ. ಈ ನಾಲ್ಕು ಭಾಷೆಯ ಕೃತಿಗಳನ್ನು ಮಠದ ಟ್ರಸ್ಟ್‌ನಿಂದ ಮುದ್ರಿಸಲಾಗಿದೆ. ಇನ್ನು ರಾಯಚೂರಿನ ಮಿಟಿ ಮಲ್ಲಕಾಪುರದಲ್ಲಿನ ಶ್ರೀಸಿದ್ಧಾರೂಢ ಮಠದ ನಿಜಾನಂದ ಶ್ರೀಗಳು ತೆಲುಗಿಗೆ ತರ್ಜುಮೆ ಮಾಡಿಸಿದ್ದಾರೆ. ವರ್ಷಕ್ಕೆ ಕನ್ನಡ 9000-10000, ಇಂಗ್ಲಿಷ್‌ 250-300, ಹಿಂದಿ 500-600, ಮರಾಠಿ ಹಾಗೂ ತೆಲುಗು 700-800 ಕೃತಿಗಳು ಮಾರಾಟವಾಗುತ್ತಿವೆ.

ತಲೆ ಮೇಲೆ ಹೊತ್ತು ಮೆರವಣಿಗೆ:

ಆರೂಢರ ಕಥಾಮೃತಕ್ಕೆ 100 ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಫೆ. 19ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿನ ಗಣೇಶಪೇಟೆಯಲ್ಲಿದ್ದ ಜಡಿಮಠ (ಜಡಿಸಿದ್ದಾಶ್ರಮ)ದಿಂದ ಆರೂಢರ ಮಠಕ್ಕೆ ಭವ್ಯ ಮೆರವಣಿಗೆ ನಡೆಯಲಿದೆ. ಆನೆ ಅಂಬಾರಿ ಮೇಲೆ ಶ್ರೀಸಿದ್ಧಾರೂಢ ಹಾಗೂ ಗುರುನಾಥರೂಢರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. 11 ಸಾವಿರ ಭಕ್ತರು ಕಥಾಮೃತ ಕೃತಿಯನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 1008 ಕುಂಭ, 1008 ಆರತಿ ಹಿಡಿದು ಸುಮಂಗಲೆಯರು ಪಾಲ್ಗೊಳ್ಳಲಿದ್ದಾರೆ. ಆದರೆ ಭಕ್ತರ ಹುಮ್ಮಸ್ಸು ನೋಡಿದರೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಉಂಟು. ಫೆ. 20ರಿಂದ 26ರ ವರೆಗೆ ವಿಶ್ವ ವೇದಾಂತ ಪರಿಷತ್‌ ನಡೆಯಲಿದೆ. ಪರಿಷತ್‌ನಲ್ಲಿ 200ಕ್ಕೂ ಹೆಚ್ಚು ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ಒಟ್ಟಿನಲ್ಲಿ ಶ್ರೀಸಿದ್ಧಾರೂಢರ ಕಥಾಮೃತಕ್ಕೆ 100ರ ಸಂಭ್ರಮ ಆಚರಿಸುತ್ತಿರುವುದು ಭಕ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿರುವುದಂತೂ ಸತ್ಯ.

ಶ್ರೀಸಿದ್ಧಾರೂಢರ ಕಥಾಮೃತಕ್ಕೆ ಇದೀಗ ಶತಮಾನೋತ್ಸವ. ಈ ಹಿನ್ನೆಲೆಯಲ್ಲಿ ಫೆ. 19ರಂದು 10ರಿಂದ 11 ಸಾವಿರ ಭಕ್ತರು ಕಥಾಮೃತ ಕೃತಿಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ನಡೆಸಲಿದ್ದಾರೆ. 1008 ಕುಂಭ, 1008 ಆರತಿ ಹಿಡಿದು ಸುಮಂಗಲೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಫೆ. 20ರಿಂದ ಒಂದು ವಾರ ವಿಶ್ವ ವೇದಾಂತ ಪರಿಷತ್‌ ನಡೆಯಲಿದೆ ಎಂದು ವಿಶ್ವ ವೇದಾಂತ ಪರಿಷತ್‌ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಹೇಳಿದರು.ಶ್ರೀಸಿದ್ಧಾರೂಢ ಕಥಾಮೃತ ನಮ್ಮ ಜೀವನ ಪಾವನಗೊಳಿಸಿದ ಕೃತಿ. ನಮಗೆ ಕಷ್ಟ ಬಂದಾಗ ಸಪ್ತಾಹದಲ್ಲಿ ಪಾರಾಯಣ ಮಾಡಿದರೆ ಧನಾತ್ಮಕತೆ ಹೆಚ್ಚಾಗುತ್ತದೆ. ಕಷ್ಟಗಳು ತಾನಾಗಿಯೇ ಮಾಯವಾಗುತ್ತವೆ. ನಾನು ಪ್ರತಿವರ್ಷ ಕಥಾಮೃತದ ಸಪ್ತಾಹ ಪಾರಾಯಣ ಮಾಡುತ್ತೇನೆ ಎಂದು ಭಕ್ತರಾದ ವಿಜಯಲಕ್ಷ್ಮಿ ಹೇಳಿದರು.