ಸಾಹಿತ್ಯ ಸಮ್ಮೇಳನ ಗೋಷ್ಠಿಯಲ್ಲಿ ಕೇಳುಗರ ಹೃದಯ ಗೆದ್ದ ಕಥೆಗಾರರು

| Published : Feb 03 2024, 01:47 AM IST

ಸಾಹಿತ್ಯ ಸಮ್ಮೇಳನ ಗೋಷ್ಠಿಯಲ್ಲಿ ಕೇಳುಗರ ಹೃದಯ ಗೆದ್ದ ಕಥೆಗಾರರು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಸಾಹಿತ್ಯ ಗ್ರಾಮದಲ್ಲಿ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಶುಕ್ರವಾರದ ಕಾರ್ಯಕ್ರಮದಲ್ಲಿ ಕಥೆಗಾರರು ತಮ್ಮ ಅನುಭವದ ಹೂರಣವನ್ನು ಕಥೆಗಳ ಮೂಲಕ ಕೇಳುಗರನ್ನು ತಲುಪಿದರು. ಕಲ್ಪನೆಯ ಸನ್ನಿವೇಶಗಳಲ್ಲಿ ಆಗಾಗ್ಗೆ ಬರುತ್ತಿದ್ದ ನವಿರಾದ ಹಾಸ್ಯ, ಗಂಭೀರತೆಗಳೊಂದಿಗೆ ಸಮ್ಮೇಳನದ ಗೋಷ್ಠಿಗೆ ಹೊಸತನದ ಚಿಂತನೆ ಮೂಡಿಸಿತು. ಖ್ಯಾತ ಲೇಖಕ ಕಲೀಂ ಉಲ್ಲಾ ತಾವು ರಚಿಸಿದ 'ಪ್ರೇಮ ಪತ್ರಗಳು' ಕಥೆ, ಶಿಕ್ಷಕಿ ನೇತ್ರಾವತಿ ರಚಿಸಿದ 'ಸೋಜಿಗ', ಅಧ್ಯಾಪಕ ಡಾ.ಲವ ರಚಿಸಿದ 'ದ್ವಾಪರ', ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ರಚಿಸಿದ 'ಅಡಿಕೆ ಕೊನೆ', ಸಾಗರದ ಪರಮೇಶ್ವರ ಕರೂರು ರಚಿಸಿದ 'ಅಪ್ಪನ ಕಾಗೆ', ಲೇಖಕ ಸೂರ್ಯಪ್ರಕಾಶ್ ರಚಿಸಿದ 'ಉತ್ಸವ' ಕಥೆಗಳು ಕೇಳುಗರ ಮನಸೂರೆಗೊಂಡಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಸಾಹಿತ್ಯ ಗ್ರಾಮದಲ್ಲಿ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಶುಕ್ರವಾರದ ಕಾರ್ಯಕ್ರಮದಲ್ಲಿ ಕಥೆಗಾರರು ತಮ್ಮ ಅನುಭವದ ಹೂರಣವನ್ನು ಕಥೆಗಳ ಮೂಲಕ ಕೇಳುಗರನ್ನು ತಲುಪಿದರು. ಕಲ್ಪನೆಯ ಸನ್ನಿವೇಶಗಳಲ್ಲಿ ಆಗಾಗ್ಗೆ ಬರುತ್ತಿದ್ದ ನವಿರಾದ ಹಾಸ್ಯ, ಗಂಭೀರತೆಗಳೊಂದಿಗೆ ಸಮ್ಮೇಳನದ ಗೋಷ್ಠಿಗೆ ಹೊಸತನದ ಚಿಂತನೆ ಮೂಡಿಸಿತು.

ಖ್ಯಾತ ಲೇಖಕ ಕಲೀಂ ಉಲ್ಲಾ ತಾವು ರಚಿಸಿದ ''ಪ್ರೇಮ ಪತ್ರಗಳು'' ಕಥೆ, ಶಿಕ್ಷಕಿ ನೇತ್ರಾವತಿ ರಚಿಸಿದ ''ಸೋಜಿಗ'', ಅಧ್ಯಾಪಕ ಡಾ.ಲವ ರಚಿಸಿದ ''ದ್ವಾಪರ'', ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ರಚಿಸಿದ ''ಅಡಿಕೆ ಕೊನೆ'', ಸಾಗರದ ಪರಮೇಶ್ವರ ಕರೂರು ರಚಿಸಿದ ''ಅಪ್ಪನ ಕಾಗೆ'', ಲೇಖಕ ಸೂರ್ಯಪ್ರಕಾಶ್ ರಚಿಸಿದ ''ಉತ್ಸವ'' ಕಥೆಗಳು ಕೇಳುಗರ ಮನಸೂರೆಗೊಂಡಿತು.

ಅಧ್ಯಕ್ಷತೆ ವಹಿಸಿದ್ದ ಕಥೆಗಾರ ಕಂ.ನಾಡಿಗ ನಾರಾಯಣ ಮಾತನಾಡಿ, ಸಮಕಾಲೀನ ತಲ್ಲಣಗಳನ್ನು ಕಥೆಗಳ ಮೂಲಕ ಹಿಡಿದಿಡುವ ಪ್ರಯತ್ನಗಳು ನಡೆಯಬೇಕು. ಕಥೆ ಮತ್ತು ವರದಿಗೆ ವ್ಯತ್ಯಾಸಗಳಿದ್ದು, ಸಂಪೂರ್ಣ ಸತ್ಯ ಹೇಳಿದಾಗ ವರದಿ ಆಗುತ್ತದೆ. ಅದಕ್ಕೆ ಕಾಲ್ಪನಿಕ ಸ್ಪರ್ಶ ನೀಡಿದಾಗ ‌ಅದ್ಭುತ ಕಥೆಯಾಗಿ ಹೊರಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಲೋಚನ ನಿರೂಪಿಸಿದರು. ಡಿ.ಗಣೇಶ್ ಸ್ವಾಗತಿಸಿ, ರಿಪ್ಪನ್‌ಪೇಟೆಯ ಮಂಜುನಾಥ ಕಾಮತ್ ವಂದಿಸಿದರು.

- - -

ಬಾಕ್ಸ್‌

ಒತ್ತುವರಿ ತೆರವು ಮಾಡಬೇಕು: ಸತೀಶ್‌ ಶಿವಮೊಗ್ಗ: ಮಲೆನಾಡು ಸುರಕ್ಷಿತವಲ್ಲ. ಮಲೆನಾಡನ್ನು ಸಂರಕ್ಷಿಸಬೆಕಾಗುತ್ತದೆ ಎಂದು ಶಿವಮೊಗ್ಗ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಜಿ.ಕೆ.ಸತೀಶ್ ಹೇಳಿದರು.

"ಮುಳುಗುತ್ತಿರುವ ಮಲೆನಾಡು " ಗೋಷ್ಠಿಯಲ್ಲಿ "ಅರಣ್ಯ- ಆತಂಕ " ವಿಷಯದ ಕುರಿತು ಮಾತನಾಡಿದ ಅವರು, ನ್ಯಾಯಾಲಯ 3 ಎಕರೆ ಬಗರ್‌ಹುಕುಂ ಮಂಜೂರು ಮಾಡಿಕೊಡಬೇಕು. ಗುಡ್ಡಗಳಿಗೆ ಬೇಲಿ ಹಾಕಿದವರು, ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದು ಸಂಕೀರ್ಣ ಸ್ಥಿತಿ ಇಲ್ಲಿದೆ. ಬಲಾಢ್ಯರು ಮಾಡಿರುವ ಒತ್ತುವರಿ ತೆರವು ಮಾಡಬೇಕು. ನದಿಗಳು ಕೂಡ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದರು.

"ಕೃಷಿ ಮತ್ತು ಸವಾಲು " ಕುರಿತು ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಅರಣ್ಯ ಭೂಮಿಯನ್ನು ಗುತ್ತಿಗೆ ಪಡೆದಿರುವ ಕಂಪನಿಗಳು ಅದೇ ಭೂಮಿ‌ ಅಡವಿಟ್ಟು ಕೋಟಿ ಕೋಟಿ ಸಾಲ ಪಡೆಯುತ್ತಿವೆ. ಬಡವರನ್ನು‌ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ದೂರಿದರು.

ಆಹಾರ ಉತ್ಪಾದನೆಯ ಸ್ವಾಮ್ಯವನ್ನು ದೊಡ್ಡ ಕಂಪನಿಗಳಿಗೆ ನೀಡಿ‌ ಜನರನ್ನು‌ ಗ್ರಾಹಕರನ್ನಾಗಿ‌ ಮಾಡಲಾಗುತ್ತಿದೆ. ನಾವು ಕೊಡುವ ಆಹಾರವನ್ನೇ ನೀವು ಬಳಕೆ ಮಾಡಬೇಕೆಂಬ ಉದ್ದೇಶ ಕೇಂದ್ರ ಮತ್ತು ರಾಜ್ಯ ಸರ್ಕಾರದ್ದಾಗಿದೆ ಎಂದರು.

ಕೃಷಿ ವಲಯ ರೈತನಿಂದ ಕೈ ತಪ್ಪಿದ ಪರಿಣಾಮ‌ ಅಕ್ಕಿ, ರಾಗಿ, ಬೆಲ್ಲ ಮೊದಲಾದ ವಸ್ತುಗಳು ದುಬಾರಿಯಾಗಿವೆ. ಗ್ರಾಹಕರಿಗೆ ಇದು ಹೊರೆಯಾಗುತ್ತಿದೆ. ಆದರೂ ಗ್ರಾಹಕ‌ಪ್ರಜ್ಞೆ ಕಡಿಮೆಯಾಗುತ್ತಿದೆ ಎಂದರು.

- - - -2ಎಸ್ಎಂಜಿಕೆಪಿ10:

ಶಿವಮೊಗ್ಗ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಶುಕ್ರವಾರ ನಡೆದ ಮುಳುಗುತ್ತಿರುವ ಮಲೆನಾಡು ಗೋಷ್ಠಿಯಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್‌ ಮಾತನಾಡಿದರು.