ಸಾರಾಂಶ
ಅ. ೨೯ರಂದು ನಡೆಯಲಿರುವ ವಿಶೇಷ ಕಥಾಕೂಟ ಸಮಾವೇಶ
ಸಣ್ಣಕಥೆಗಳ ಗುಂಪಿನ 5ನೇ ಸಮ್ಮಿಲನ ಇದುಕನ್ನಡಪ್ರಭ ವಾರ್ತೆ ಹಾವೇರಿ
ಕನ್ನಡ ಸಣ್ಣಕತೆಗಳಿಗಾಗಿ ಮೀಸಲಾದ ಕನ್ನಡ ಕಥೆಗಾರರ ವಾಟ್ಸ್‌ಆ್ಯಪ್ ಬಳಗ ಕಥೆಕೂಟದ ಐದನೇ ವಾರ್ಷಿಕ ಸಮಾವೇಶ ಆಚರಿಸಿಕೊಳ್ಳುತ್ತಿದ್ದು, ಶಿಗ್ಗಾಂವಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಈ ಸಮಾವೇಶ ಅ.28 ಹಾಗೂ ಅ.29ರಂದು ನಡೆಯಲಿದೆ.ಕಥೆಕೂಟಕ್ಕೆ ಏಳು ವರ್ಷ ತುಂಬಿದ್ದು, ಆ ಹಿನ್ನೆಲೆ ಈ ಸಮಾವೇಶ ನಡೆಯುತ್ತಿದೆ. ಈ ಎರಡು ದಿನಗಳಂದು ಕಥೆಕೂಟದ ಸದಸ್ಯರು ಹಾಗೂ ಆಹ್ವಾನಿತ ಅತಿಥಿ ಬರಹಗಾರರು ಸೇರಿ ಕನ್ನಡ ಸಾಹಿತ್ಯ ಲೋಕದ ವೈವಿಧ್ಯ, ನೆಲೆ- ಬೆಲೆ, ಬರಹಗಾರಿಕೆಯ ಸೂಕ್ಷ್ಮಗಳ ಬಗ್ಗೆ ಚರ್ಚಿಸಲಿದ್ದಾರೆ. ನಾನು ಬರೆಯುವುದು ನನ್ನ ಕಥೆ, ನಾನು ಬರೆಯುವುದು ಜನಪ್ರಿಯ ಕಥೆ, ನಾನು ಬರೆಯುವುದು ನನ್ನ ಕಾಲದ ಕಥೆ, ನಾನು ಬರೆಯುವುದು ಪರಂಪರೆಯ ಕಥೆ, ನಾನು ಓದುವುದು ನನ್ನ ಕಥೆ, ಕಥಾ ಸಮಯ, ತೆರೆದ ಮನ ಎಂಬ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ.
ಅತಿಥಿಗಳಾಗಿ ಕಥೆಗಾರ ರಾಘವೇಂದ್ರ ಪಾಟೀಲ, ಕವಿ ಬಿ.ಆರ್. ಲಕ್ಷ್ಮಣ ರಾವ್, ನಿರ್ದೇಶಕ ಬಿ.ಎಸ್ ಲಿಂಗದೇವರು, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್, ಜಮೀಲ್ ಸಾವಣ್ಣ, ಮೋಹನ ಭಾಸ್ಕರ ಹೆಗಡೆ, ಉತ್ಸವ ರಾಕ್ ಗಾರ್ಡನ್‌ನ ಪ್ರಕಾಶ್ ದಾಸನೂರು, ವೇದರಾಣಿ ದಾಸನೂರು ಭಾಗವಹಿಸಲಿದ್ದಾರೆ. ಕಥೆಕೂಟದ ಹಿರಿಯ ಕಥೆಗಾರರಾದ ಜೋಗಿ (ಗಿರೀಶರಾವ್ ಹತ್ವಾರ್), ಗೋಪಾಲಕೃಷ್ಣ ಕುಂಟಿನಿ ಮತ್ತು ಇತರ ಸದಸ್ಯರು ಇರುತ್ತಾರೆ. ಗೋಷ್ಠಿಗಳ ಜತೆಗೆ ಕಥಾ ಸಂಕಲನ ಬಿಡುಗಡೆ, ಕತೆಗಳ ಓದು, ಕತೆಕೂಟ ವಾರ್ಷಿಕ ಪ್ರಶಸ್ತಿ ಪ್ರದಾನವೂ ಇರಲಿದೆ.ಏನಿದು ಕಥೆಕೂಟ?:
ಕಥೆಗಳಿಗೆ ಸೀಮಿತವಾದ ''''''''ಕಥೆಕೂಟ'''''''' ಎಂಬುದೊಂದು ವಿಶಿಷ್ಟವಾದ ವಾಟ್ಸ್‌ಆ್ಯಪ್ ಗ್ರೂಪ್. ವಾಟ್ಸ್‌ಆ್ಯಪ್ ಗ್ರೂಪ್‌ಗಳು ಅಂದ ತಕ್ಷಣ ಬಂದಿದ್ದನ್ನು ಫಾರ್ವರ್ಡ್ ಮಾಡುವ ಅಥವಾ ಹಾಳುಹರಟೆಗಳಲ್ಲಿ ಕಾಲ ತಳ್ಳುವ ತಂತ್ರಜ್ಞಾನ ಎಂದಾಗಿರುವ ಸಂದರ್ಭದಲ್ಲಿ ಇದನ್ನು ಕಥೆಗೋಸ್ಕರ ಮೀಸಲಿಟ್ಟು ಸೃಜನಶೀಲವಾಗಿ ರೂಪಿಸಿದವರು ಕತೆಗಾರ ಹಾಗೂ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಹಾಗೂ ಜೋಗಿ. ಪ್ರತಿಯೊಂದು ಘಟನೆಯಲ್ಲೂ ಕತೆಯಿದೆ, ಪ್ರತಿಯೊಬ್ಬರಲ್ಲೂ ಕತೆಯಿದೆ ಎಂದು ನಂಬಿರುವ ಗೋಪಾಲಕೃಷ್ಣ ಕುಂಟಿನಿ ಜೂನ್ 25, 2016ರಂದು ಗೆಳೆಯ ಜೋಗಿಗೆ ಕರೆ ಮಾಡಿ ಇದರ ಕಲ್ಪನೆ ಬಿತ್ತಿದರು. ಹೀಗೆ ಎಲ್ಲರೊಳಗಿರುವ ಕಥೆಯನ್ನು ಹೇಳುವುದಕ್ಕೆ, ಕೇಳುವುದಕ್ಕೆ ಒಂದು ವೇದಿಕೆಯನ್ನು ಕಟ್ಟಬೇಕು ಎಂಬ ಆಶಯದಿಂದ ಕಥೆಕೂಟ ಆರಂಭವಾಯಿತು.ಈ ಕೂಟದಲ್ಲಿ ಮೊದಲ ಬಾರಿಗೆ ಕತೆ ಬರೆದ ಅನೇಕ ಯುವ ಕತೆಗಾರರು ಇದೀಗ ಕನ್ನಡದ ಭರವಸೆಯ ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಅನೇಕರು ಎರಡು ಮೂರು ಸಂಕಲನ, ಕಾದಂಬರಿ ಪ್ರಕಟಿಸಿದ್ದಾರೆ. ಕತೆಕೂಟದ ಸದಸ್ಯರ ಕತೆಗಳ ಆಯ್ದ ಸಂಕಲನಗಳಾದ ''''''''ಮಳೆಯಲ್ಲಿ ನೆನೆದ ಕಥೆಗಳುʼ ಹಾಗೂ ''''''''ಒಲವು ತುಂಬುವುದಿಲ್ಲʼ ಪ್ರಕಟವಾಗಿವೆ. ಇದರ ಹಿಂದಿನ ಸಮಾವೇಶಗಳು ಸಕಲೇಶಪುರ, ಶರಾವತಿ ಹಿನ್ನೀರಿನ ಹಕ್ಲು, ಉಪ್ಪಿನಂಗಡಿ ಹಾಗೂ ನೆಲಮಂಗಲದ ಗುಬ್ಬಿಗೂಡು ರೆಸಾರ್ಟಿನಲ್ಲಿ ನಡೆದಿದ್ದವು.
ಈ ಕಥಾಕೂಟ ಸಮ್ಮಿಲನದಲ್ಲಿ ಭಾಗವಹಿಸಲು ಇಚ್ಛಿಸುವ ಧಾರವಾಡ , ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಕಥೆಗಾರರು, ಸಾಹಿತಿಗಳು, ಸಾಹಿತ್ಯಾಸಕ್ತರು ಸಚಿನ್ ತೀರ್ಥಹಳ್ಳಿ (9632397599) ಮತ್ತು ಮಹೇಶ್ ಅರಬಳ್ಳಿ (9739012926) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.