ಕುಳ್ಳನ ಮುಂಟಿ ಬಳಿ ನಿತ್ರಾಣಗೊಂಡ ಹುಲಿ ಪತ್ತೆ

| Published : Aug 16 2025, 12:00 AM IST

ಕುಳ್ಳನ ಮುಂಟಿ ಬಳಿ ನಿತ್ರಾಣಗೊಂಡ ಹುಲಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಕಾದಾಟದಲ್ಲಿ ಕಾಲಿಗೆ ಗಾಯಗೊಂಡಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆ ರಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದ ಘಟನೆ ಶುಕ್ರವಾರ ಕುಂದಕೆರೆ ವಲಯದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಕಾದಾಟದಲ್ಲಿ ಕಾಲಿಗೆ ಗಾಯಗೊಂಡಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆ ರಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದ ಘಟನೆ ಶುಕ್ರವಾರ ಕುಂದಕೆರೆ ವಲಯದಲ್ಲಿ ನಡೆದಿದೆ.

ಸುಮಾರು ೮ ವರ್ಷದ ಗಂಡು ಹುಲಿಯು ಕುಂದಕೆರೆ ವಲಯದಂಚಿನ ಕುಳ್ಳನ ಮುಂಟಿಯ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಕಂದಾಯ ಭೂಮಿಯಲ್ಲಿ ಬಿದ್ದು ಒದ್ದಾಡುತ್ತಿತ್ತು. ರೈತರು ಹುಲಿ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್‌ ಹಾಗೂ ಕುಂದಕೆರೆ ವಲಯ ಅರಣ್ಯಾಧಿಕಾರಿ ಎಚ್.ಎನ್.ನಾಗೇಂದ್ರ ನಾಯಕ್‌ ಸ್ಥಳಕ್ಕೆ ಪರೀಶಲಿಲಿದ್ದು, ಬಳಿಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಕುಳ್ಳನ ಮುಂಟಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಪಶು ವೈದ್ಯ ಡಾ.ವಾಸೀಂ ಮಿರ್ಜಾ ನಿತ್ರಾಣಗೊಂಡ ಸ್ಥಿತಿಯಲ್ಲಿ ಬಿದ್ದಿದ್ದ ಹುಲಿಗೆ ಅರವಳಿಕೆ ಮದ್ದು ನೀಡಿದ ಬಳಿಕ ಕಾಲಿಗೆ ಪ್ರಥಮ ಚಿಕಿತ್ಸೆ ಕೊಟ್ಟಿದ್ದಾರೆ. ನಂತರ ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್‌ ಮಾತನಾಡಿ, ಹುಲಿಗಳ ಕಾದಾಟದಲ್ಲಿ ನಿತ್ರಾಣಗೊಂಡ ಹುಲಿ ಕಾಲಿಗೆ ಗಾಯವಾಗಿ ನಡೆಯಲು ಆಗದ ಕುಳ್ಳನ ಮುಂಟಿ ಬಳಿ ಬಿದ್ದಿರುವುದು ಗೊತ್ತಾಗಿ, ಚಿಕಿತ್ಸೆಗೆ ಕಳುಹಿಸಲಾಗಿದೆ. ಮತ್ತೊಂದು ಹುಲಿಗೂ ಗಾಯಗಳಾಗಿರಬಹುದು ಎಂದು ಆ ಹುಲಿಯ ಹೆಜ್ಜೆ ಗುರುತಿನ ಹಿಂದೆ ಅರಣ್ಯ ಸಿಬ್ಬಂದಿಗಳ ಮೂಲಕ ಕೂಂಬಿಂಗ್‌ ಜೊತೆಗೆ ದ್ರೋಣ್‌ ಮೂಲಕವೂ ಪ್ರಯತ್ನ ಮಾಡಲಾಗಿದೆ ಎಂದರು.

ಕುಂದಕೆರೆ ವಲಯದಲ್ಲಿ ಹುಲಿಗಳ ಕಾದಾಟದಲ್ಲಿ ಗಾಯಗೊಂಡ ಹುಲಿಯೊಂದನ್ನು ಅರವಳಿಕೆ ಮದ್ದು ನೀಡಿ ರಕ್ಷಿಸಲಾಗಿದೆ. ಮತ್ತೊಂದು ಹುಲಿಗೂ ಗಾಯಗೊಂಡಿರಬಹುದು ಎಂದು ಸಾಕಾನೆ ಮೂಲಕ ಹುಲಿ ಹೆಜ್ಜೆ ಗುರುತು ಆಧರಿಸಿ ಕೂಂಬಿಂಗ್‌ ಕೂಡ ಕುಳ್ಳನ ಮುಂಟಿ ಬಳಿ ಶುರುವಾಗಿದೆ. ಸಾಕಾನೆ ಜೊತೆ ಸಿಬ್ಬಂದಿಗಳ ಕೂಂಬಿಂಗ್‌ ನಡೆಸಿ ಹುಲಿ ಸೆರೆ ಹಿಡಿದು ಚಿಕಿತ್ಸೆ ಕೊಡಿಸಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಎಸಿಎಫ್‌ ಕೆ.ಸುರೇಶ್‌ ಮಾಹಿತಿ ನೀಡಿದ್ದಾರೆ.