ಕನ್ನಡಪ್ರಭ ವಾರ್ತೆ ತುಮಕೂರು

ಐದು ರಾಜ್ಯಗಳ ಚುನಾವಣೆ ಇರುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟ ಲೋಕಸಭಾ ವಿಶೇಷ ಅಧಿವೇಶದಲ್ಲಿ ಮಂಡಿಸಿದ ಮಹಿಳಾ ಮೀಸಲು ಮಸೂದೆ ತೆರೆ ಮರೆಯಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಹೂಡಿದ ತಂತ್ರವಾಗಿತ್ತು ಎಂದು ಕೆಪಿಸಿಸಿ ವಕ್ತಾರೆ ಕುಸುಮಾ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023 ರ ಸೆಪ್ಟಂಬರ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆಯಾಗಿ, ಒಮ್ಮತದಿಂದ ಅಂಗೀಕಾರವಾದ ಮಸೂದೆಯನ್ನು ಜಾರಿಗೆ ತರದೆ, ಐದು ರಾಜ್ಯಗಳ ಚುನಾವಣೆಯಲ್ಲಿ ಮತದಾರರ ಮುಂದೆ ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂದು ಬಿಂಬಿಸುವ ಸಲುವಾಗಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮಾಡಿದ ಕುತಂತ್ರವಾಗಿದೆ. ಈ ಸತ್ಯವನ್ನು ಜನರ ಮುಂದಿಡುವ ಸಲುವಾಗಿ ಕೆಪಿಸಿಸಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಮಾಧ್ಯಮಗಳು ಮತ್ತು ಜನರ ಮುಂದೆ ಇಂತಹ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಯುಪಿಎ ಸರ್ಕಾರ ಸಿದ್ಧಪಡಿಸಿದ ಮಹಿಳಾ ಬಿಲ್‌ನ್ನು ಅದೇ ಹೆಸರಿನಲ್ಲಿ 2023ರಲ್ಲಿ ಮಂಡಿಸಿ, ಒಪ್ಪಿಗೆ ಪಡೆದು, 2026ರ ಜನಗಣತಿ ನಂತರ ಕ್ಷೇತ್ರಗಳ ಪುನರ್ ವಿಂಗಡನೆ ಮಾಡಿ,ನಂತರ ಜಾರಿಗೆ ತರುವ ಮಾತುಗಳನ್ನಾಡಿದ್ದ ಕೇಂದ್ರ ಸರ್ಕಾರ, ಐದು ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಜನರ ಬಳಿ ಹೋಗಲು ಮುಖವಿಲ್ಲದೆ, ಮತ್ತೊಮ್ಮೆ ನಾರಿ ಶಕ್ತಿ ವಂದನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ನಾಟಕವಾಡಿತು ಎಂದರು.

ನಿಜವಾದ ಮಹಿಳಾ ವಿರೋಧಿಗಳೆಂದರೆ ಅದು ಬಿಜೆಪಿ. ಮಹಿಳೆಯರ ಬಗ್ಗೆ ಅಷ್ಟು ಕಾಳಜಿ ಇದ್ದರೆ ಈಗಾಗಲೇ ಅನುಮೋದನೆ ಯಾಗಿರುವ ಬಿಲ್‌ನ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ33 ರಷ್ಟು ಮಹಿಳಾ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಲಿ ಎಂದು ಕುಸುಮ ಸವಾಲು ಹಾಕಿದರು.


ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ,ಕೇವಲ ಐದು ರಾಜ್ಯಗಳ ಚುನಾವಣೆಯಲ್ಲಿ ಮತಗಳಿಸುವ ಉದ್ದೇಶದಿಂದ ಈಗಾಗಲೇ ಎರಡು ಸದನಗಳಲ್ಲಿ ಅನುಮೋದನೆಗೊಂಡಿರುವ ಮಹಿಳಾ ಮೀಸಲು ಮಸೂದೆ ಪುನಃ ಮಂಡಿಸಿ, ಕಾಂಗ್ರೆಸ್ ಪಕ್ಷವನ್ನು ಮಹಿಳಾ ವಿರೋಧಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಪಕ್ಷ ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಕೊಡುಗೆ ಏನು ? ಎಂದು ಪ್ರಶ್ನಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಬಿಜೆಪಿ ಪಕ್ಷ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸಲು ಹೊರಟಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೆಪಿಸಿಸಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಅಭಿಯಾನ ನಡೆಸಿ, ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮೊದಲ ಹಂತದಲ್ಲಿ ನಡೆಸಿದ್ದೇವೆ. ಎರಡನೇ ಹಂತದಲ್ಲಿ ಶಾಲಾ, ಕಾಲೇಜುಗಳಲ್ಲಿ ಯುವಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಕೆಪಿಸಿಸಿಯ ಡಾ.ವನಿತಾ, ಕೆಪಿಸಿಸಿ ಮತ್ತೊಬ್ಬ ಮುಖಂಡರಾದ ಶುಭ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ, ವಿಜಯಲಕ್ಷ್ಮಿ, ಎಸ್ಸಿ ಸೇಲ್‌ನ ಲಿಂಗರಾಜು, ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ಮಂಜುನಾಥ್, ಶಿವಾಜಿ, ಸೇವಾದಳದ ಭೈಲಪ್ಪ, ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.