ಬಹುವರ್ಷಗಳಿಂದ ನನೆಗುದ್ದಿಗೆ ಬಿದಿದ್ದ ಜಿಲ್ಲಾ ಪಂಚಾಯತಿ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಸ್ಥಳೀಯ ರಾಜಕಾರಣ ಗರಿಗೆದರಿದೆ. ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಪಡೆಯಲು ಹಾಗೂ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ.ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೬ ಜಿಪಂ ಕ್ಷೇತ್ರಗಳಿವೆ.

ಎಚ್.ಎನ್.ನಾಗರಾಜು

ಕನ್ನಡಪ್ರಭ ವಾರ್ತೆ ಕೊರಟಗೆರೆ

ಬಹುವರ್ಷಗಳಿಂದ ನನೆಗುದ್ದಿಗೆ ಬಿದಿದ್ದ ಜಿಲ್ಲಾ ಪಂಚಾಯತಿ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಸ್ಥಳೀಯ ರಾಜಕಾರಣ ಗರಿಗೆದರಿದೆ. ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಪಡೆಯಲು ಹಾಗೂ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ.ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೬ ಜಿಪಂ ಕ್ಷೇತ್ರಗಳಿವೆ. ಹೊಳವನಹಳ್ಳಿ, ಕಸಬಾ, ಕೋಳಾಲ, ಕೋರಾ, ಸಿ.ಎನ್.ದುರ್ಗ, ಪುರವಾರ ಕ್ಷೇತ್ರದ ಮೀಸಲಾತಿಯನ್ನು ಈಗಾಗಲೇ ರಾಜ್ಯ ಸರ್ಕಾರ ಪ್ರಕಟಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ನಾಯಕರು ಈಗಾಗಲೇ ಅಭ್ಯರ್ಥಿಗಳ ಹುಡುಕಾಟ ಪ್ರಾರಂಭಿಸಿದ್ದಾರೆ. ಹಣ ಬಲ, ಜನ ಬಲ ಹೊಂದಿರುವ ಸ್ಥಳೀಯ ನಾಯಕರನ್ನು ಕಣಕ್ಕೆ ಇಳಿಸಲು ತಂತ್ರ ಹೆಣೆಯುತ್ತಿದ್ದಾರೆ.

೨೦೧೫ರ ಡಿಸೆಂಬರ್‌ನಲ್ಲಿ ಕಳೆದ ಅವಧಿ ಚುನಾವಣೆ ನಡೆದಿದ್ದು, ೨೦೨೦ರ ಡಿಸೆಂಬರ್‌ಗೆ ಅವರ ಅವಧಿ ಮುಗಿದಿತ್ತು. ೬ ವರ್ಷಗಳಿಂದ ಜಿಪಂ ಹಾಗೂ ತಾಪಂ ಚುನಾವಣೆ ನಡೆಯದೆ ಬೇಸತ್ತಿದ್ದ ಸ್ಥಳೀಯ ನಾಯಕರು ಮೀಸಲಾತಿ ಪ್ರಕಟಗೊಂಡ ನಂತರ ಭಾರೀ ಕ್ರಿಯಾಶೀಲರಾಗಿದ್ದಾರೆ. ಈಗಾಗಲೇ ತೆರೆಮರೆಯಲ್ಲಿ ಕ್ಷೇತ್ರದ ಅಭ್ಯರ್ಥಿಯಾಗಲು ಸ್ಥಳೀಯ ನಾಯಕರು ಹಾಗೂ ಪಕ್ಷದ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.ಹೊಳವನಹಳ್ಳಿ ಜಿಪಂ ವ್ಯಾಪ್ತಿಗೆ ಬರುವ ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ ಹಾಗೂ ಬೋಮ್ಮಲದೇವಿಪುರ ಸೇರಿ ಒಟ್ಟು ೪ ತಾಪಂ ಬರಲಿದ್ದು, ಒಟ್ಟು ೩೫,೮೭೬ ಮತದಾರರು ಇದ್ದಾರೆ. ಇದರಲ್ಲಿ ಪುರುಷರು ೧೮,೨೦೦, ಮಹಿಳೆಯರು ೧೭೬೭೬. ಕ್ಷೇತ್ರದಲ್ಲಿ ಎಸ್ಸಿ. ೭೭೨೭, ಎಸ್ಟಿ ೩೬೫೬, ೨೪೪೯೩ ಇತರೆ ಮತದಾರರು ಇದ್ದಾರೆ. ಹೊಳವನಹಳ್ಳಿ ಜಿಪಂನಲ್ಲಿ ಹೆಚ್ಚು ಕಾಂಗ್ರೆಸ್ ಆಭ್ಯರ್ಥಿಗಳು ಜಯಗಳಿಸಿದ್ದು, ಕಾಂಗ್ರೆಸ್ ಭದ್ರ ಕೋಟೆ ಎಂದೇ ಬಿಂಬಿತಗೊಂಡಿರುವ ಕ್ಷೇತ್ರವಾಗಿದೆ.

ಕ್ಷೇತ್ರ ಸರ್ವೆ ಕಾರ್ಯ;

ಜಿಪಂ, ತಾಪಂ ಚುನಾವಣೆ ನಡೆಸಲು ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲೇ ಆಕಾಂಕ್ಷಿಗಳು ಕ್ಷೇತ್ರ ಹುಡುಕಾಟಕ್ಕಾಗಿ ಸರ್ವೆ ಕಾರ್ಯ ಮಾಡಿಸುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಗೆಲ್ಲಲು ಸಾಧ್ಯ ಎಂದು ಆಭ್ಯರ್ಥಿಗಳು ತೆರೆಮರೆಯಲ್ಲಿ ಲೆಕ್ಕಾಚಾರ ಮಾಡುತ್ತಿದ್ದಾರೆ. ಜೊತೆಗೆ ರಾಜಕೀಯ ನಾಯಕರ ಜತೆಯಲ್ಲಿ ಸೋಲು-ಗೆಲವಿನ ಲೆಕ್ಕಾಚಾರ ಚರ್ಚೆ ಮಾಡುತ್ತಿದ್ದಾರೆ. ಆಕಾಂಕ್ಷಿಗಳ ದಂಡು:

ಹೊಳವನಹಳ್ಳಿ ಜಿಪಂ ಚುನಾವಣಾ ಕಣಕ್ಕೆ ಕಾಂಗ್ರೆಸ್ ಪಕ್ಷದಿಂದ ಆಶ್ವಥ್‌ನಾರಾಯಣ್, ಎಂಎನ್‌ಜೆ ಮಂಜಣ್ಣ, ಮಹಾಲಿಂಗಪ್ಪ, ಎಲ್. ರಾಜಣ್ಣ, ವೆಂಕಟೇಶ್, ಎನ್‌ಡಿಎಯಿಂದ ಡಾ. ದರ್ಶನ್ ಕೆ.ಎಲ್., ಆರ್. ಚಂದ್ರಕಲಾ. ಪಿ.ಎನ್. ಕೃಷ್ಣಮೂರ್ತಿ, ಕರಕಲಘಟ್ಟದ ಸ್ವಾಮಿ, ಎಲ್.ವಿ. ಪ್ರಕಾಶ್ ಸೇರಿ ಇತರರು ಟಿಕೆಟ್‌ಗಾಗಿ ಕಸರತ್ತು ಪ್ರಾರಂಭಿಸಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೧೦ ವರ್ಷದಿಂದ ಮನೆ ಮಗನಾಗಿ ಜನಸೇವೆ ಮಾಡಿಕೊಂಡು ಬರುತ್ತಿದ್ದು, ಕರೋನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸ್ನೇಹಿತರ ಜೊತೆ ಸೇರಿ ಜನಸೇವೆ ಮಾಡಿದ್ದೇನೆ. ಹೊಳವನಹಳ್ಳಿ ಜಿಪಂ ಕ್ಷೇತ್ರ ಗಡಿಭಾಗವಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುತ್ತೇನೆ.

ಮಂಜುನಾಥ್, ಎಂಎನ್‌ಜೆ ಗ್ರೂಪ್ ಮಾಲೀಕರು. ಹೊಳವನಹಳ್ಳಿ ಜಿಪಂ ಪ್ರಬಲ ಆಕಾಂಕ್ಷಿ.-------

ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಎನ್‌ಡಿಎವತಿಯಿಂದ ಸ್ಪರ್ಧಿಸಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ, ಪಕ್ಷದ ವರಿಷ್ಠರು ಹಾಗೂ ಹಿರಿಯ ನಾಯಕರು ನನ್ನ ಸೇವೆ ಮತ್ತು ಸಂಘಟನಾ ಕಾರ್ಯವನ್ನ ಪರಿಗಣಿಸಿ ಅವಕಾಶ ನೀಡಿದಲ್ಲಿ ಜನರ ವಿಶ್ವಾಸಕ್ಕೆ ಬದ್ಧನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಜನಸೇವೆಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ.

ಡಾ. ದರ್ಶನ್ ಕೆ.ಎಲ್. ಹೊಳವನಹಳ್ಳಿ ಜಿಪಂ. ಎನ್‌ಡಿಎ ಆಕಾಂಕ್ಷಿನಾನು ಕಾಂಗ್ರೆಸ್ ಪಕ್ಷದ ನಿಷ್ಠವಂತ ಕಾರ್ಯಕರ್ತ. ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ನನಗೆ ಹೊಳವನಹಳ್ಳಿ ಜಿಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿದರೆ ಅವರ ನಂಬಿಕೆ ಉಳಿಸುವ ಕೆಲಸ ಮಾಡುತ್ತೇನೆ. ಹಾಗೆ ಹೊಳವನಹಳ್ಳಿ ಜಿಪಂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ.

ಮಹಾಲಿಂಗಪ್ಪ, ಕಾಂಗ್ರೆಸ್ ಮುಖಂಡರು ಹೊಳವನಹಳ್ಳಿ ಜಿಪಂ ಪ್ರಬಲ ಆಕಾಂಕ್ಷಿ.