ಹಿರೇಕೆರೂರಿನಲ್ಲಿ ಬೀದಿ ನಾಯಿಗಳ ಹಾವಳಿ: ಕಂಗಾಲಾದ ಜನತೆ

| Published : Jun 24 2024, 01:33 AM IST

ಸಾರಾಂಶ

ಹಿರೇಕೆರೂರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಚಿಕ್ಕ ಮಕ್ಕಳು, ಮನೆ ಮನೆಗೆ ತೆರಳಲು ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಹಿರೇಕೆರೂರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಚಿಕ್ಕ ಮಕ್ಕಳು, ಮನೆ ಮನೆಗೆ ತೆರಳಲು ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಪಟ್ಟಣ ಪಂಚಾಯತಿಗೆ ಈಗಾಗಲೇ ಅನೇಕ ಬಾರಿ ಮೌಖಿಕವಾಗಿ ಹೇಳಿದರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕೇಳಿಯೂ ಕೇಳದ ರೀತಿ ಇದ್ದಾರೆ. ಕೂಡಲೆ ಇವುಗಳನ್ನು ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಇಲ್ಲಿಯ ಬಸ್‌ ನಿಲ್ದಾಣ, ಅಜಾದ ನಗರ ಸಂತೆ ಮೈದಾನ, ಸಿಇಎಸ್ ಸಂಸ್ಥೆಯ ಎದುರು, ಪೇಟೆ ಬಸವೇಶ್ವರ ದೇವಸ್ಥಾನದ ಬಳಿ, ಚೌಡಿ ಸರ್ಕಲ್, ಜಾಲಿಕಟ್ಟೆ, ಮಿನಿ ವಿಧಾನಸಭಾ ಮುಂಭಾಗ, ಬಸ್ ನಿಲ್ದಾಣ, ಸರ್ವಜ್ಞ ಸರ್ಕಲ್, ಗುರುಭವನ, ವಿದ್ಯಾನಗರ, ಜನತಾ ಪ್ಲಾಟ್, ಹೌಸಿಂಗ್ ಬೋರ್ಡ, ಸಂತೆ ಮೈದಾನ, ಹೊಸೂರು ಪ್ರಮುಖ ರಸ್ತೆ, ಪಟ್ಟಣ ಪಂಚಾಯಿತಿ ಬಳಿ ಸೇರಿದಂತೆ ವಿವಿಧ ಕಾಲೋನಿಗಳಲ್ಲಿ ವಿಪರೀತವಾಗಿ ಗುಂಪು ಗುಂಪಾಗಿ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಇನ್ನು ಹಂದಿಗಳ ಮೇಲಿನ ದಾಳಿಗಳ ಸಂಖ್ಯೆಯಂತೂ ಮೀತಿ ಮೀರಿದೆ. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವ ಜನತೆಯ ಮೇಲೂ ನಾಯಿಗಳು ಎರಗಿ ಗಾಯಗೊಳಿಸಿದ ಘಟನೆಗಳು ನಡೆದಿವೆ. ಇನ್ನು ಬೈಕಿಗೆ ಅಡ್ಡ ಬಂದ ಪರಿಣಾಮ ಅನೇಕ ಬೈಕ್ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಲಾ ಸಮಯದಲ್ಲಿ ಮಕ್ಕಳು ಜೀವಭಯದಿಂದ ಶಾಲೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ಮತ್ತು ರಾತ್ರಿಯ ಸಮಯದಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಸವಾರನನ್ನು ಬೆನ್ನುಹತಿದ್ದು, ಕೆಲವರನ್ನು ಕಚ್ಚಿವೆ. ಕೆಲವರನ್ನು ವಾಹನದಿಂದ ಬೀಳಿಸಿವೆ. ಕೂಡಲೇ ಪಟ್ಟಣ ಪಂಚಾಯಿತಿ ಇಲಾಖೆಯವರು ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.