ಕನ್ನಡಪ್ರಭ ವಾರ್ತೆ ಹುಕ್ಕೇರಿ ಯುವಕನನ್ನು ಬೀದಿ ನಾಯಿಗಳು ಮಾರಣಾಂತಿಕವಾಗಿ ಕಚ್ಚಿದ ಪರಿಣಾಮ ಆತ ಕೋಮಾ ಸ್ಥಿತಿಗೆ ತಲುಪಿರುವ ದಾರುಣ ಘಟನೆ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಈತನ ಜೀವಕ್ಕೆ ಅಪಾಯ ತಂದೊಡ್ಡಿದ ಬೀದಿ ನಾಯಿಗಳ ಹಾವಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಯುವಕನನ್ನು ಬೀದಿ ನಾಯಿಗಳು ಮಾರಣಾಂತಿಕವಾಗಿ ಕಚ್ಚಿದ ಪರಿಣಾಮ ಆತ ಕೋಮಾ ಸ್ಥಿತಿಗೆ ತಲುಪಿರುವ ದಾರುಣ ಘಟನೆ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಈತನ ಜೀವಕ್ಕೆ ಅಪಾಯ ತಂದೊಡ್ಡಿದ ಬೀದಿ ನಾಯಿಗಳ ಹಾವಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಬಸವರಾಜ ಸದಾಶಿವ ಹೆಬ್ಬಾಳೆ (30) ಬೀದಿ ನಾಯಿಗಳ ದಾಳಿಗೊಳಗಾದವ. ಸೋಮವಾರ ಸಂಜೆ ಸುಮಾರು 8 ರಿಂದ 10 ಬೀದಿ ನಾಯಿಗಳ ಹಿಂಡು ಬಸವರಾಜನನ್ನು ಬೆನ್ನಟ್ಟಿ ಏಕಾಏಕಿ ದಾಳಿ ಮಾಡಿವೆ. ಈತನ ದೇಹದ ವಿವಿಧ ಭಾಗಗಳ ಮೇಲೆ ಸಿಕ್ಕ ಸಿಕ್ಕಲ್ಲಿ ಕಚ್ಚಿ ಪರಾರಿಯಾಗಿವೆ. ದಾಳಿಯ ಪರಿಣಾಮ ಬಸವರಾಜನ ದೇಹದ ನಾನಾ ಭಾಗಗಳಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ಇದರಿಂದ ತೀವ್ರ ಅಸ್ವಸ್ಥನಾದ ಆತನನ್ನು ಹುಕ್ಕೇರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಗಾಯಾಳು ಬಸವರಾಜ ಕೋಮಾ ಸ್ಥಿತಿ ತಲುಪಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. 15 ದಿನಗಳ ಹಿಂದೆ ಇದೇ ಗ್ರಾಮದಲ್ಲಿ 4 ವರ್ಷ ಮಗುವಿನ ಮೇಲೂ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು, ವಯೋವೃದ್ಧರು ಜೀವಭಯದಲ್ಲೇ ಕಾಲ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ಪುರಸಭೆಯ ಅಧೀನದ ಹೊರವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಜಮಾಯಿಸುವ ಬೀದಿ ನಾಯಿಗಳು ಈ ದಾಳಿ ಮಾಡಿವೆ ಎನ್ನಲಾಗಿದೆ.