ಯುವಕನ ಮೇಲೆ ಬೀದಿ ನಾಯಿಗಳ ದಾಳಿ

| Published : Jul 24 2024, 12:19 AM IST

ಸಾರಾಂಶ

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಗುಂಪು ಗುಂಪಾಗಿ ತಿರುಗಾಡುವ ನಾಯಿಗಳನ್ನು ಕಂಡು ಜನರು ಆತಂಕಗೊಂಡಿದ್ದಾರೆ. ವಾಟ್ಸ್‌ ಆ್ಯಪ್‌ಗಳಲ್ಲಿ ಮಗುವಿನ ಮೇಲೆ ಬೀದಿ ನಾಯಿಗಳು ನಡೆಸುವ ದಾಳಿಯ ತುಣುಕುಗಳು ಪದೇ ಪದೇ ಬರುತ್ತಿರುವುದನ್ನು ಕಂಡಿರುವ ಜನರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಭೀತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.೧ ರ ಸೂರನಹಳ್ಳಿಯಲ್ಲಿ ಸೋಮವಾರ ರಾತ್ರಿ ೭ ಗಂಟೆ ಸುಮಾರಿನಲ್ಲಿ ಬೀದಿ ನಾಯಿಗಳ ದಾಳಿಯಿಂದ ಬಾಲರಾಜ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಸೌಲಭ್ಯವಿಲ್ಲದೇ ಗಾಯಾಳುವನ್ನು ಕುಟುಂಬ ಸದಸ್ಯರು ಹಾಸನಕ್ಕೆ ಕರೆದ್ಯೊಯ್ದಿದ್ದಾರೆ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಗುಂಪು ಗುಂಪಾಗಿ ತಿರುಗಾಡುವ ನಾಯಿಗಳನ್ನು ಕಂಡು ಜನರು ಆತಂಕಗೊಂಡಿದ್ದಾರೆ. ವಾಟ್ಸ್‌ ಆ್ಯಪ್‌ಗಳಲ್ಲಿ ಮಗುವಿನ ಮೇಲೆ ಬೀದಿ ನಾಯಿಗಳು ನಡೆಸುವ ದಾಳಿಯ ತುಣುಕುಗಳು ಪದೇ ಪದೇ ಬರುತ್ತಿರುವುದನ್ನು ಕಂಡಿರುವ ಜನರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಭೀತರಾಗಿದ್ದಾರೆ.

ಪಟ್ಟಣದ ಪೇಟೆ ಮುಖ್ಯ ರಸ್ತೆ, ರಿವರ್‌ಬ್ಯಾಂಕ್ ರಸ್ತೆ, ನರಸಿಂಹನಾಯಕ ನಗರ, ಗಾಂಧಿನಗರ, ಡಾ.ಅಂಬೇಡ್ಕರ್‌ನಗರ, ಹೌಸಿಂಗ್ ಬೋರ್ಡ್ ಕಾಲೋನಿ, ಚಿಟ್ಟನಹಳ್ಳಿ ಬಡಾವಣೆ, ಹೇಮಾವತಿ ಬಡಾವಣೆ, ಮಹಾತ್ಮಗಾಂಧಿ ವೃತ್ತ, ವಿವಿಧ ಬಡಾವಣೆಗಳು ಹಾಗೂ ಹಾಸನ, ಮೈಸೂರು, ಅರಕಲಗೂಡು ಹಾಗೂ ಕೆರಳಪುರ ಹೆದ್ದಾರಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಬಡಾವಣೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ಪಟ್ಟಣದ ಸೀತಾವಿಲಾಸ ರಸ್ತೆಯ ಬ್ರಾಹ್ಮಣ ಅರ್ಚಕರ ಮನೆ ಹಿಂಬಾಗಿಲ ಪಕ್ಕದಲ್ಲಿ ಕರು ಒಂದನ್ನು ನಾಯಿಗಳು ಕಚ್ಚಿ ಕೊಂದು ಹಾಕಿದ್ದವು, ಕುರಿ, ಕರುಗಳ ಮೇಲೆ ದಾಳಿ ನಡೆಸುತ್ತಿದ್ದ ಬೀದಿ ನಾಯಿಗಳು ಈಗ ಮನುಷ್ಯರ ಮೇಲೆ ದಾಳಿ ಪ್ರಾರಂಭಿಸಿದ್ದು, ಜನರ ಭಯಭೀತರಾಗಲು ಕಾರಣವಾಗಿದೆ.

ಸೂರನಹಳ್ಳಿಯ ಬಾಲರಾಜ್ ಮಾತನಾಡಿ, ನನ್ನ ಮೇಲೆ ನಾಯಿಗಳು ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸುತ್ತಿದ್ದ ಸಂದರ್ಭದಲ್ಲಿ ಕುರಿ ಒಂದು ಓಡಿದಾಗ ನಾಯಿಗಳು ಕುರಿ ಹಿಂದೆ ಹೋದ ಕಾರಣದಿಂದ ನಾನು ಪಾರಾದೆ, ನಾಯಿಗಳು ಕುರಿಯನ್ನು ಮಾರಣಾಂತಿಕವಾಗಿ ಗಾಯಗೊಳಿಸಿವೆ, ನನ್ನ ಕೈಯಲ್ಲಿ ಏನೂ ಇಲ್ಲದಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಇಂಜಕ್ಷನ್ ಒಂದನ್ನು ಕೊಟ್ಟು, ನನ್ನನ್ನು ಕಳುಹಿಸಿದರು. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಕರ್ನಾಟಕ ರಾಜ್ಯ ಜಾಗೃತದಳದ ಮುಖ್ಯ ತನಿಖಾಧಿಕಾರಿ ಶ್ರೀನಿವಾಸ್ ಅವರು ಎಲ್ಲಾ ಚಿಕಿತ್ಸೆಯನ್ನು ಇಲ್ಲೇ ನೀಡಬೇಕು, ಹೊರಗಡೆಗೆ ಔಷಧಿ ಚೀಟಿ ಬರೆಯಬಾರದು ಎಂದು ಸಲಹೆ ನೂಚನೆಗಳನ್ನು ನೀಡಿ ತೆರಳಿದ್ದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ತನಿಖಾಧಿಕಾರಿಗಳ ಸಲಹೆ, ಮಾರ್ಗದರ್ಶನವನ್ನು ಆಸ್ಪತ್ರೆಯ ಆಡಳಿತ ಮಂಡಳಿ ಪಾಲನೆ ಮಾಡುತ್ತಿಲ್ಲ, ಇವರು ನನ್ನನ್ನು ಹಾಸನಕ್ಕೆ ಕಳುಹಿಸಿದರು ಎಂದು ಬೇಸರದಿಂದ ನುಡಿದರು. ನಾಯಿಗಳ ಸಮಸ್ಯೆ ಕುರಿತು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಮಾತನಾಡಿ, ನಾಯಿಗಳನ್ನು ಹಿಡಿದು ಸಾಗಿಸಲು ಟೆಂಡರ್ ಕರೆಯಲಾಗಿದ್ದು, ಕೆಲವರು ಟೆಂಡರ್ ಹಾಕಿದ್ದಾರೆ, ನಾಳೆ ಟೆಂಡರ್ ತೆರೆದು, ನಾಯಿಗಳನ್ನು ಹಿಡಿಯಲು ಅನುಮತಿ ನೀಡುತ್ತೇವೆ ಎಂದರು.