ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರು, ಐದು ಪಾಲಿಕೆ ಅಧಿಕಾರಿಗಳನ್ನು ವಿಚಾರಣೆ ನಡೆಸಿ, ಕೆಲವೊಂದು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರು, ಐದು ಪಾಲಿಕೆ ಅಧಿಕಾರಿಗಳನ್ನು ವಿಚಾರಣೆ ನಡೆಸಿ, ಕೆಲವೊಂದು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ಪ್ರಕರಣದ ವಿಚಾರಣೆಗೆ ಸೋಮವಾರ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಪಶ್ಚಿಮ ಪಾಲಿಕೆಯ ವಲಯ-1ರಲ್ಲಿ 32 ಪ್ರಕರಣಗಳು ಹಾಗೂ ವಲಯ-2ರಲ್ಲಿ 31 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿರುವ ಮಾಹಿತಿಯನ್ನು ಲೋಕಾಯುಕ್ತರಿಗೆ ಒದಗಿಸಿದರು. ಇವುಗಳಲ್ಲಿ ಗಂಭೀರ ತರಹದ ಯಾವುದೇ ಪ್ರಕರಣಗಳು ಇರುವುದಿಲ್ಲ. ನಾಯಿ ಕಡಿತದಿಂದ ತೊಂದರೆಗೊಳಗಾದವರಿಗೆ ಎಲ್ಲಾ ರೀತಿಯ ಸಹಕಾರವನ್ನು ಪಾಲಿಕೆ ವತಿಯಿಂದ ನೀಡಲಾಗುತ್ತಿದೆ ಎಂದು ಮಾಹಿತಿ ಸಲ್ಲಿಸಿದರು.

ಉತ್ತರ ಪಾಲಿಕೆಯ ಪಶುಸಂಗೋಪನೆಯ ಸಹಾಯಕ ನಿರ್ದೇಶಕರು ಕಳೆದ ಮೂರು ತಿಂಗಳಲ್ಲಿ 44 ನಾಯಿ ಕಚ್ಚಿದ ಪ್ರಕ್ರಣಗಳು ವರದಿಯಾಗಿರುತ್ತದೆ ಎಂಬ ಮಾಹಿತಿ ಒದಗಿಸಿದರು. ಇವುಗಳ ಪೈಕಿ ರೇಬಿಸ್‌ನಿಂದ ತೊಂದರೆಗಳಗಾದ ಯಾವುದೇ ಪ್ರಕರಣಗಳು ಇರುವುದಿಲ್ಲವೆಂಬ ಮಾಹಿತಿ ಒದಗಿಸಿದರು. ವೀರೇಶ್ ಎಂಬ ವ್ಯಕ್ತಿಗೆ ಅನೇಕ ಕಡೆ ನಾಯಿ ಕಚ್ಚಿದ್ದರಿಂದ, ಅವನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿದ್ದು, ಪ್ರಸ್ತುತ ವ್ಯಕ್ತಿಯು ಸಂಪೂರ್ಣ ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಸಲ್ಲಿಸಿದರು. ನಾಯಿ ಕಚ್ಚಿದವರಿಗೆ ಆಸ್ಪತ್ರೆಯ ವೆಚ್ಚವನ್ನು ಪಾಲಿಕೆಯಿಂದ ಹಿಂತಿರುಗಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಮಾಹಿತಿ ಒದಗಿಸಿದರು.

ದಕ್ಷಿಣ ಪಾಲಿಕೆಯ ಪಶುಸಂಗೋಪನೆಯ ಸಹಾಯಕ ನಿರ್ದೇಶಕರು ಸರ್ವೋಚ್ ನ್ಯಾಯಾಲಯದ ಆದೇಶದಂತೆ, ಶೆಲ್ಟರ್ ಹೋಂಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಅಂತಹ ನಾಯಿಗಳನ್ನು ಪ್ರತ್ಯೇಖಿಸಿ ಅವುಗಳನ್ನು ಆರೈಕೆ ಮಾಡಲೂ ಸಹ ಕ್ರಮ ಕೈಗೊಳ್ಳುತ್ತಿರುವುದಾಗಿ ಮಾಹಿತಿ ಒದಗಿಸಿದರು. ಪಾಲಿಕೆ ವ್ಯಾಪ್ತಿಯ ಬಿಂಗಾಪುರದಲ್ಲಿ ಒಂದು ಶೆಲ್ಟರ್ ಅನ್ನು ನಿರ್ಮಿಸುತ್ತಿದ್ದು. ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದರು. ಈ ಬಗ್ಗೆ ಮುಂದಿನ ವಿಚಾರಣೆಯಂದು ವರದಿ ಸಲ್ಲಿಸುವಂತೆ ಸೂಚಿಸಲಾಯಿತು.

ದಕ್ಷಿಣ ಪಾಲಿಕೆಯ ವಲಯ-2ರ ಪಶುಸಂಗೋಪನೆಯ ಸಹಾಯಕ ನಿರ್ದೇಶಕರು ಕಳೆದ ಮೂರು ತಿಂಗಳಲ್ಲಿ 26 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿರುತ್ತವೆ ಎಂದು ತಿಳಿಸಿದರು.

ಪಶ್ಚಿಮ ಪಾಲಿಕೆಯ ಮುಖ್ಯ ಪಶುಸಂಗೋಪನಾಧಿಕಾರಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಶ್ವಾನಗಳಿಗೆ ಶೆಲ್ಟರ್‌ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಮಾಹಿತಿ ಸಲ್ಲಿಸಿದರು. ಈ ಬಗ್ಗೆ ಮುಂದಿನ ವಿಚಾರಣಾ ದಿನಾಂಕದಂದು ವರದಿ ಸಲ್ಲಿಸುವಂತೆ ತಾಕೀತು ಮಾಡಲಾಯಿತು.

ಕೇಂದ್ರ ಪಾಲಿಕೆಯಲ್ಲಿ 32 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿರುತ್ತವೆ. ಅವುಗಳಲ್ಲಿ ಯಾವುದೇ ಗಂಭೀರ ಸ್ವರೂಪದ ಪ್ರಕರಣಗಳು ಇರುವುದಿಲ್ಲ. ಶೆಲ್ಟರ್ ಹೋಂಗಳನ್ನು ನಿರ್ಮಿಸಲು ಮೂರು ಸ್ಥಳಗಳನ್ನು ಗುರುತಿಸಿರುವ ಅಂಶವನ್ನು ತಿಳಿಸಿದರು.

ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 41 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿರುವ ಅಂಶವನ್ನು ತಿಳಿಸಿದರು. ಈ ನಾಯಿಗಳ ಪೈಕಿ ಶೆಲ್ಟರ್ ಹೋಂನಲ್ಲಿ ಇರಿಸಲಾಗಿದ್ದ ಎರಡು ನಾಯಿಗಳು ಸತ್ತಿರುತ್ತದೆ ಎಂಬ ಮಾಹಿತಿ ತಿಳಿಸಿದರು. ಈ ಹಂತದಲ್ಲಿ ಶೆಲ್ಟರ್ ಹೋಂನಲ್ಲಿ ಇಡುವ ನಾಯಿಗಳ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಮುಂದಿನ ವಿಚಾರಣಾ ದಿನಾಂಕದಂದು ಸಲ್ಲಿಸುವಂತೆ ಆದೇಶಿಸಿದರು.

ಹಾಜರಿದ್ದ ಎಲ್ಲ ಅಧಿಕಾರಿಗಳಿಗೂ ತಾವು ಕೈಗೊಂಡ ಕ್ರಮದ ಬಗ್ಗೆ ವಿಸ್ತ್ರತ ವರದಿಯನ್ನು ಸಲ್ಲಿಸುವಂತೆ ತಿಳಿಸಿ. ಮುಂದಿನ ವಿಚಾರಣೆಯನ್ನು ಫೆ.26 ನಿಗದಿಪಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.