ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ, ಬೇಕಾಗಿದೆ ‘ಬೀದಿ ಶ್ವಾನಗಳ‌ ಪುರ್ನವಸತಿ ಕೇಂದ್ರ’

| Published : Jul 19 2025, 02:00 AM IST

ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ, ಬೇಕಾಗಿದೆ ‘ಬೀದಿ ಶ್ವಾನಗಳ‌ ಪುರ್ನವಸತಿ ಕೇಂದ್ರ’
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯಲ್ಲಿ ಬೀದಿ ನಾಯಿಗಳಿಗೆ ಊಟೋಪಚಾರ, ಔಷಧೋಪಚಾರ, ಆರೈಕೆಯ ವ್ಯವಸ್ಥೆಗೊಳಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು ಮತ್ತು ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರದಲ್ಲಿ ಬೀದಿ ಶ್ವಾನಗಳ‌ ಸಂಖ್ಯೆಯು ಮಿತಿ ಮೀರಿದ್ದು, ಬೀದಿ ನಾಯಿಗಳ ಹೆಚ್ಚಳದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಮಸ್ಯೆಗಳು ಉದ್ಭವಿಸಿವೆ. ಆದರೇ ಪ್ರತಿಯೊಬ್ಬ ಜೀವಿಗಳಂತೆ ನಾಯಿಗಳಿಗೂ ಬದುಕುವ ಹಕ್ಕಿದೆ. ಅವುಗಳ ಬದುಕನ್ನು ಕಸಿಯುವ‌ ಹಕ್ಕು ಯಾರಿಗೂ ಇಲ್ಲ. ಅವುಗಳು ಬದುಕಲು ಪೂರಕ ವ್ಯವಸ್ಥೆ ಕಲ್ಪಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ. ಆದ್ದರಿಂದ ಜಿಲ್ಲಾಡಳಿತ, ನಗರಾಡಳಿತವು ನಗರದ ಹೊರ ವಲಯದಲ್ಲಿ ಆಯಕಟ್ಟಿನ ಸ್ಥಳವನ್ನು ಗುರುತಿಸಿ ನಾಯಿಗಳ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಬೇಕು. ಆಶ್ರಯ ಪಡೆದಿರುವ ಬೀದಿ ನಾಯಿಗಳಿಗೆ ಊಟೋಪಚಾರ, ಔಷಧೋಪಚಾರ, ಆರೈಕೆಯ ವ್ಯವಸ್ಥೆಗೊಳಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ‌ ಒಳಕಾಡು ಮತ್ತು ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ಇಲ್ಲಿನ ಶ್ರೀಕೃಷ್ಣ ಮಠದ ರಾಜಾಂಗಣ, ಯಾತ್ರಿಕರ ವಾಹನ ನಿಲುಗಡೆ ಸ್ಥಳ, ರಥ ಬೀದಿ, ಚಿತ್ತರಂಜನ್ ವೃತ್ತ, ಸಿಟಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ, ನರ್ಮ್ ಬಸ್ಸು ನಿಲ್ದಾಣ, ಸರಕಾರಿ‌ ಹಳೆ ಮತ್ತು ಹೊಸ ಬಸ್ಸು ನಿಲ್ದಾಣ, ಜಿಲ್ಲಾಸ್ಪತ್ರೆಯ ವಠಾರ, ಅಜ್ಜರಕಾಡು ಉದ್ಯಾನವನ, ಮಹತ್ಮಾಗಾಂಧಿ ಕ್ರೀಡಾಂಗಣ, ಬೀಡಿನಗುಡ್ಡೆ ಬಯಲು ರಂಗ ಮಂದಿರ, ಮೀನು ಮಾರುಕಟ್ಟೆ, ಆದಿಉಡುಪಿ ಕೃಷಿ ಉತ್ಪನ್ನ‌ ಮಾರುಕಟ್ಟೆ, ಇಂದ್ರಾಳಿಯ ರೈಲು ನಿಲ್ದಾಣ, ಹೀಗೆ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ಹೊರ ವಲಯದಲ್ಲೂ ಬೀದಿ ನಾಯಿಗಳ ಗುಂಪುಗಳೇ ನೆಲೆ ಪಡೆದಿವೆ.

ನಾಯಿಗಳಿಂದ ಆಗಾಗ್ಗೆ ಅಪಘಾತಗಳು, ಸಾರ್ವಜನಿಕರನ್ನು ಅಟ್ಟಿಸಿಕೊಂಡು ಹೋಗುವ, ಕಚ್ಚುವ ಪ್ರಕರಣಗಳು ನಡೆಯುತ್ತಿವೆ. ಮಾನವ ಪೋಷಣೆಯಲ್ಲಿ ಬದುಕಬೇಕಾದ ನಾಯಿಗಳು, ಬೀದಿನಾಯಿಗಳಾಗಿ ಆಹಾರ - ನೀರಿನ ಕೊರತೆ, ಮಳೆ, ವಿಘ್ನಸಂತೋಷಿಗಳ ಕಲ್ಲೇಟು, ಕೋಲೇಟು, ಅಪಘಾತದಿಂದ ಊನತಯಿಂದ ಇತ್ಯಾದಿ ಅಸಹನೀಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆ ಬಗೆಹರಿಸಲು "ಬೀದಿ ಶ್ವಾನಗಳ‌ ಪುನರ್‌ ವಸತಿ ಕೇಂದ್ರ " ಸ್ಥಾಪನೆಯೇ ಉತ್ತರವಾಗಿದೆ. ಜಿಲ್ಲಾಡಳಿತ, ನಗರಾಡಳಿತ ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನಹರಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.