ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬೀದಿ‌ ನಾಯಿ ಹಾವಳಿ‌ ಮಿತಿ ಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾಪಂ ಎದುರು ಪ್ರತಿಭಟನೆ ನಡೆಯಿತು.

ಕುಶಾಲನಗರ: ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬೀದಿ‌ ನಾಯಿ ಹಾವಳಿ‌ ಮಿತಿ ಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾಪಂ ಎದುರು ಪ್ರತಿಭಟನೆ ನಡೆಯಿತು.ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿಯಿಂದಾಗಿ ಜನಸಾಮಾನ್ಯರು ತಿರುಗಾಡಲು ತುಂಬಾ ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗ್ರಾಮದ ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗ್ರಾಪಂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು. ಕ್ರಮಕ್ಕೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕೂಡಿಗೆ ಕೊಪ್ಪಲು ಗ್ರಾಮದ ರಂಗಣ್ಣ ಎಂಬವರ‌ ಮೇಲೆ ಬೀದಿ‌ನಾಯಿಗಳು ಭಾನುವಾರ ದಾಳಿ ನಡೆಸಿ ಮಾರಣಾಂತಿಕವಾಗಿ ಘಾಸಿಗೊಳಿಸಿವೆ. ಜಾನುವಾರುಗಳ‌ ಮೇಲೂ ಬೀದಿ ನಾಯಿಗಳ ದಾಳಿ‌ ನಡೆಸುತ್ತಿವೆ. ಪ್ರತಿಭಟನೆ ಬಗ್ಗೆ ಸೂಚನೆಯಿದ್ದರೂ ನಮ್ಮ ಸಮಸ್ಯೆ ಕೇಳುವ ಬದಲು ಪಿಡಿಒ ರಜೆಯಲ್ಲಿ ತೆರಳಿದ ಬಗ್ಗೆ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಾಪಂ ಆಡಳಿತ ಅಧಿಕಾರಿ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಗಾಯಾಳು ಚಿಕಿತ್ಸೆಗೆ ಗ್ರಾಪಂ ವೆಚ್ಚ ಭರಿಸಬೇಕು, ಬೀದಿ ನಾಯಿಗಳ ಸಂತಾನಶಕ್ತಿ ಹರಣ ವ್ಯವಸ್ಥೆ ಮಾಡಬೇಕು ಎಂದು ಕರವೇ ಜಿಲ್ಲಾ ಸಂಚಾಲಕ ಗೋವಿಂದ ರಾಜ್ ದಾಸ್, ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ, ಸಾಮಾಜಿಕ ಕಾರ್ಯಕರ್ತ‌ ಹಕ್ಕೆ‌ ಮೋಹನ್ ಮತ್ತಿತರರು ಆಗ್ರಹಿಸಿದರು.

ಲ್ಯಾಂಪ್ಸ್ ಮಹಾ ಮಂಡಳ ಅಧ್ಯಕ್ಷ ಎಸ್.ಆರ್. ಅರುಣ್ ರಾವ್, ಕರವೇ ತಾಲೂಕು ಉಪಾಧ್ಯಕ್ಷ ಫಯಾಜುದ್ದಿನ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್. ದೇವಾಂಗ, ಗೀತಾ ರಾಜೇಶ್ ಕಲ್ಪನಾ ದಿನೇಶ್, ರೊನಾಲ್ಡ್, ಕರವೇ ತಾಲೂಕು ಅಧ್ಯಕ್ಷ‌ ನಾಗರಾಜು, ಪುಟ್ಟಮ್ಮ, ಕಮಾಲುದ್ದಿನ್, ಗ್ರಾಮಸ್ಥರಾದ ಕೂಡಿಗೆಯ ಕೆ.ಆರ್. ಗಣೇಶ್, ದಂಡಿನಮ್ಮ ಹಾಗೂ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚಂದ್ರು. ಉಪಾಧ್ಯಕ್ಷ ಪ್ರಕಾಶ್, ಕೂಡಿಗೆ ಗ್ರಾಪಂ ಮಾಜಿ ಸದಸ್ಯರಾದ ಅನಂತ್, ಕೆ.ಎಸ್. ಕಾಂತರಾಜ್. ಶಿವಕುಮಾರ್, ಬಿ.ಡಿ.. ಅಣ್ಣಯ್ಯ. ಗ್ರಾಮಸ್ಥರು ಇದ್ದರು.