ಸಾರಾಂಶ
ಹಾಸನ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾದ ಕಾರಣ ಇದೀಗ ಬೀದಿ ನಾಯಿಗಳನ್ನು ಹಿಡಿಯುವ ಮತ್ತು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ ರೇಬಿಸ್ ಲಸಿಕೆ ಹಾಕಿ ವಾಪಸ್ ಬಿಡುವ ಕಾರ್ಯಾಚರಣೆಯನ್ನು ನಗರಸಭೆಯವರು ಸೋಮವಾರದಿಂದ ಆರಂಭಿಸಿದರು. ಪ್ರತಿದಿನ ಎಲ್ಲಾ ವಾರ್ಡ್‌ಗಳಲ್ಲಿ ಹಿಡಿದಂತ ನಾಯಿಗಳನ್ನು ಕೈಗಾರಿಕಾ ಪ್ರದೇಶದಲ್ಲಿ ಶೆಡ್ ಮಾಡಲಾಗಿದ್ದು, ಇಲ್ಲಿ ಆಪರೇಷನ್ ಥಿಯೇಟರ್‌ಗಳನ್ನು ಮಾಡಲಾಗಿದೆ. ಆಪರೇಷನ್ ನಂತರ ಆ ನಾಯಿಗಳನ್ನು ಮತ್ತೆ ಎಲ್ಲಿ ಹಿಡಿಯಲಾಗಿತ್ತೋ ಅದೇ ಜಾಗಕ್ಕೆ ತಂದು ಬಿಡಲಾಗುವುದು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಲವೆಡೆ ಬೀದಿನಾಯಿಗಳ ಹಾವಳಿಯಿಂದ ಬೇಸತ್ತಿದ್ದ ಸಾರ್ವಜನಿಕರು ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ನಗರಸಭೆ ಮೇಲೆ ಭಾರೀ ಒತ್ತಡ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಬೀದಿ ನಾಯಿಗಳನ್ನು ಹಿಡಿಯುವ ಮತ್ತು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ ರೇಬಿಸ್ ಲಸಿಕೆ ಹಾಕಿ ವಾಪಸ್ ಬಿಡುವ ಕಾರ್ಯಾಚರಣೆಯನ್ನು ಸೋಮವಾರದಿಂದ ಆರಂಭಿಸಿದರು. ಹಾಸನ ನಗರದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ನೂರಾರು ಜನರು ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದ ಉದಾಹರಣೆಗಳು ಕಣ್ಣ ಮುಂದೆ ಇದ್ದು, ನಾಯಿ ಹಾವಳಿ ಕಡಿಮೆ ಮಾಡುವಂತೆ ನಗರಸಭೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಅನೇಕ ಬಾರಿ ದೂರು ನೀಡಲಾಗಿತ್ತು. ಇವನ್ನೆಲ್ಲಾ ಗಮನಿಸಿದ ನಗರಸಭೆ ಅಧಿಕಾರಿಗಳು ನಾಯಿ ಹಿಡಿದು ಮುಂದೆ ಅದರಿಂದ ಸಂತಾನ ಆಗದಂತೆ ಶಸ್ತ್ರಚಿಕಿತ್ಸೆ ಮಾಡಿ ಮತ್ತೆ ಯಾವ ಜಾಗದಲ್ಲಿ ನಾಯಿ ಹಿಡಿಯಲಾಗಿತ್ತೋ ಅದೇ ಜಾಗದಲ್ಲಿ ಬಿಡುವ ಕಾರ್ಯಾಚರಣೆ ಶುರುಮಾಡಿದೆ. ಸತತವಾಗಿ ನಾಲ್ಕು ತಿಂಗಳ ಕಾಲ ಈ ಕಾರ್ಯಾಚರಣೆ ನಡೆಸಲಿದ್ದಾರೆ. ಮನೆಯಲ್ಲಿ ಯಾರಾದರೂ ನಾಯಿ ಸಾಕಿದ್ದರೇ ಅದನ್ನು ಮನೆಯಲ್ಲೆ ಕಟ್ಟಿ ಹಾಕಿಕೊಳ್ಳಬೇಕು. ಹೊರಗೆ ಬಿಟ್ಟಾಗ ನಾಯಿ ಹಿಡಿಯುವವರ ಕಣ್ಣಿಗೆ ಬಿದ್ದರೇ ಅದನ್ನು ಹಿಡಿದು ಸಂತಾನ ಆಗದಂತೆ ಶಸ್ತ್ರಚಿಕಿತ್ಸೆ ಮಾಡುವುದು ಗ್ಯಾರಂಟಿ. ನಗರಸಭೆ ಪರಿಸರ ಇಲಾಖೆ ಎಂಜಿನಿಯರ್ ವೆಂಕಟೇಶ್ ಮಾಧ್ಯಮದೊಂದಿಗೆ ಮಾತನಾಡಿ, ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಪ್ರಕಾರ ಬೀದಿ ನಾಯಿಗಳಿಗೆ ಸಂತಾನ ಆಗದ ರೀತಿ ಶಸ್ತ್ರಚಿಕಿತ್ಸೆಯನ್ನು ಹಾಸನ ನಗರಸಭೆ ವತಿಯಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರತಿದಿನ ಎಲ್ಲಾ ವಾರ್ಡ್‌ಗಳಲ್ಲಿ ಹಿಡಿದಂತ ನಾಯಿಗಳನ್ನು ಕೈಗಾರಿಕಾ ಪ್ರದೇಶದಲ್ಲಿ ಶೆಡ್ ಮಾಡಲಾಗಿದ್ದು, ಇಲ್ಲಿ ಆಪರೇಷನ್ ಥಿಯೇಟರ್‌ಗಳನ್ನು ಮಾಡಲಾಗಿದೆ. ಆಪರೇಷನ್ ನಂತರ ಆ ನಾಯಿಗಳನ್ನು ಮತ್ತೆ ಎಲ್ಲಿ ಹಿಡಿಯಲಾಗಿತ್ತೋ ಅದೇ ಜಾಗಕ್ಕೆ ತಂದು ಬಿಡಲಾಗುವುದು.ನಾಯಿ ಹಿಡಿದು ಶಸ್ತ್ರ ಚಿಕಿತ್ಸೆ ನೀಡುವ ಈ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ನಾಲ್ಕು ತಿಂಗಳ ಕಾಲ ನಾಯಿ ಹಿಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಟ್ಟು ೨೩೦೦ ನಾಯಿಗಳಿಗೆ ಆಪರೇಷನ್ ಮಾಡಲಾಗುವುದು. ಕಳೆದ ಬಾರಿ ಒಂದು ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಹಿಡಿದ ನಾಯಿಗಳನ್ನು ಆಪರೇಷನ್ ಮಾಡಿದ ಬಗ್ಗೆ ಫೋಟೋ ಸಮೇತ ದಾಖಲೆ ನೀಡಿದ್ದು, ಇದರಲ್ಲಿ ಯಾವ ಅವ್ಯವಹಾರಗಳು ನಡೆದಿರುವುದಿಲ್ಲ. ಹೊರ ಭಾಗದಿಂದ ನಾಯಿಗಳು ವಲಸೆ ಬರುವುದರಿಂದ ನಾಯಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗಲು ಕಾರಣವಾಗಿದೆ. ನಗರಸಭೆಯ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಾಗಿದ್ದು, ಇನ್ನು ಮುಂದೆ ನಿರಂತರವಾಗಿ ಪ್ರತಿವರ್ಷ ಇಂತಹ ಕಾರ್ಯಾಚರಣೆ ಮಾಡಲಾಗುವುದು. ಇದರಿಂದ ನಾಯಿಗಳ ಸಂತಾನ ಕಡಿಮೆ ಮಾಡಲಾಗುವುದು ಎಂದು ಹೇಳಿದರು.
ಇದೆ ವೇಳೆ ಆರೋಗ್ಯಾಧಿಕಾರಿಗಳಾದ ಆದೀಶ್, ಪ್ರಸಾದ್, ಚೇತನ್, ಮಂಜುನಾಥ್ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಗೂ ನಾಯಿ ಹಿಡಿಯುವವರು ಉಪಸ್ಥಿತರಿದ್ದರು.*ಹೇಳಿಕೆ-1
ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳು ಏನಾದರೂ ಇದ್ದರೇ ಅವುಗಳ ಮಾಲೀಕರು ಅವುಗಳನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಬೇಕು. ಏನಾದರೂ ಬೀದಿಗೆ ಬಿಟ್ಟರೆ ಅವುಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುವುದು. ಮುಂದೆ ಯಾವುದೇ ರೀತಿ ತೊಂದರೆ ಆದರೇ ನಗರಸಭೆ ಜವಾಬ್ದಾರಿಯಲ್ಲ ಎಂದರು.ವೆಂಕಟೇಶ್, ನಗರಸಭೆ ಪರಿಸರ ಇಲಾಖೆ ಎಂಜಿನಿಯರ್