ಸಾರಾಂಶ
ಮೋಹನ್ ರಾಜ್
ಕನ್ನಡಪ್ರಭ ವಾರ್ತೆ ಮಡಿಕೇರಿ ರಾತ್ರಿ ಬೆಳಕು ನೀಡಬೇಕಾದ ಬೀದಿ ದೀಪಗಳು ಯಾವುದು ಉರಿಯುತ್ತಿಲ್ಲ. ಹೀಗಾಗಿ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಇಡಿ ಪಟ್ಟಣವನ್ನೇ ಕತ್ತಲು ಆವರಿಸಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಗಮನ ಹರಿಸಬೇಕಾಗಿರುವ ಸ್ಥಳೀಯ ಆಡಳಿತ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಬೆಳಗದ ಬೀದಿ ದೀಪ ಕತ್ತಲಿನಲ್ಲಿ ನಗರ:ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಹೆಗ್ಗಳಿಕೆ ಹೊಂದಿರುವ ವಿರಾಜಪೇಟೆ ತಾಲೂಕಿನ ಸಿದ್ದಾಪುರಲ್ಲಿ ಕೆಲ ತಿಂಗಳುಗಳಿಂದ ರಾತ್ರಿ ಆಗುತ್ತಿದ್ದಂತೆ ಕರೆಂಟ್ ಇದ್ದರೂ ಕೂಡ ಕತ್ತಲು ಆವರಿಸಿ ಬೆಳಕು ಮಾಯವಾಗುತ್ತಿದೆ. ರಾತ್ರಿ ವೇಳೆ ಬೆಳಕು ನೀಡಬೇಕಾಗಿರುವ ಬೀದಿ ದೀಪಗಳು ಯಾವುದು ಬೆಳಗುತ್ತಿಲ್ಲ. ಇದರಿಂದಾಗಿ ಜನ ರಾತ್ರಿ ಹೊತ್ತು ಪಟ್ಟಣದ ಒಳಗೆ ಓಡಾಡಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣ ಮಧ್ಯೆ ಒಂದೇ ಒಂದು ಸೋಲಾರ್ ದೀಪ ಇದೆಯಾದರೂ ಅದರ ಬೆಳಕು ಎಲ್ಲೆಡೆ ಬೀಳುತ್ತಿಲ್ಲ ಅದನ್ನು ಕೂಡ ಇಲ್ಲಿನ ಸ್ಥಳೀಯ ಖಾಸಗಿ ಸಂಸ್ಥೆಯೊಂದು ಕೊಡುಗೆಯಾಗಿ ನೀಡಿದ್ದು, ಅದರ ನಿರ್ವಹಣೆಯನ್ನು ಸ್ವತಃ ತಾವೇ ಮಾಡುತ್ತಿದ್ದಾರೆ.ಇಲ್ಲಿ ಪಂಚಾಯತಿ ಲೋಪವೋ ಅಥವಾ ವಿದ್ಯುತ್ ಇಲಾಖೆ ಲೋಪವೋ ಗೊತ್ತಿಲ್ಲ ಆದರೆ ಸಂಕಷ್ಟ ಎದುರಿಸುತ್ತಿರುವುದು ಮಾತ್ರ ಸಾರ್ವಜನಿಕರು ಎಂಬುವುದರಲ್ಲಿ ಎರಡು ಮಾತಿಲ್ಲ.ಸಾರ್ವಜನಿಕರ ಆಕ್ರೋಶ:ಸಾರ್ವಜನಿಕ ಸ್ಥಳಗಳಲ್ಲಿ ಪ್ರಮುಖವಾಗಿ ಬಸ್ ನಿಲ್ದಾಣ, ಪಟ್ಟಣ ರಸ್ತೆಗಳಲ್ಲಿ ರಾತ್ರಿ ವೇಳೆ ಬೀದಿ ದೀಪಗಳು ಉರಿಯುವಂತೆ ನೋಡಿಕೊಳ್ಳಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿಯೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಇನ್ನೂ ವಿದ್ಯುತ್ ಇಲಾಖೆ ಸಿಬ್ಬಂದಿಗಳಿಗೂ ಇದರ ಅವಶ್ಯಕತೆ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾತ್ರಿ ವೇಳೆ ನಗರದಲ್ಲಿ ಬೆಳಕಿಲ್ಲದೆ ಇರುವುದರಿಂದ ಇಲ್ಲಿ ಯಾವುದೇ ಅಪಘಾತವಾಗಲಿ, ದರೋಡೆಯಾಗಲಿ, ಅಹಿತಕರ ಘಟನೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆದರು ಸಂಬಂಧಪಟ್ಟವರನ್ನು ಪತ್ತೆ ಹಚ್ಚುವುದು ಕೂಡ ಕಷ್ಟ ಸಾಧ್ಯ ಎಂಬುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.ಈ ಭಾಗದಲ್ಲಿ ಮೂರು ರಾಷ್ಟ್ರೀಕೃತ ಬ್ಯಾಂಕುಗಳು, ಒಂದು ಗ್ರಾಮೀಣ ಬ್ಯಾಂಕ್, ಎರಡು ಸ್ಥಳೀಯ ಬ್ಯಾಂಕುಗಳು ಹಾಗೂ ಎಟಿಎಂ ಕೂಡ ಇವೆ. ರಾತ್ರಿಯಾಗುತ್ತಿದ್ದಂತೆ ವರ್ತಕರು ಕೂಡ ಅಂಗಡಿ ಮುಂಗಟ್ಟು ಮುಚ್ಚಿ ತಮ್ಮ ವಾಸ ಸ್ಥಳಗಳಿಗೆ ತೆರಳುತ್ತಾರೆ. ಹೀಗಿರುವಾಗ ರಾತ್ರಿ ಪಟ್ಟಣ ಸಂಪೂರ್ಣ ಕತ್ತಲಿನಿಂದ ಕೂಡಿರುವುದು ಕಳ್ಳಕಾಕರಿಗೆ ದಾರಿ ಮಾಡುತ್ತಿರುವಂತಿದೆ. ವಲಸೆ ಕಾರ್ಮಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ನಗರದಲ್ಲಿ ಹೊಸ ಮುಖಗಳು ಓಡಾಡುತ್ತಿವೆ.ಈ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಸ್ಥಳೀಯ ಶಾಸಕರು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪಟ್ಟಣದಲ್ಲಿ ಬೀದಿ ದೀಪಗಳು ಬೆಳಗುವಂತೆ ಕ್ರಮ ಕೈಗೊಳ್ಳಬೇಕೆಂಬುವುದೇ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.ಸಿದ್ದಾಪುರಕ್ಕೆ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಇದೆಯಷ್ಟೇ. ಇಲ್ಲಿ ನೂರೆಂಟು ಸಮಸ್ಯೆಗಳಿವೆ ಯಾವುದಕ್ಕೂ ಇಲ್ಲಿವರೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸ್ಥಳೀಯ ಪಂಚಾಯಿತಿ ವಿಫಲವಾಗಿದೆ. ಕಸದ ವಿಲೇವಾರಿ ಸಮಸ್ಯೆ ಜತೆಗೆ ರಾತ್ರಿ ಪಟ್ಟಣಕ್ಕೆ ಬೆಳಕು ಚೆಲ್ಲಬೇಕಾದ ಬೀದಿ ದೀಪಗಳು ಉರಿಯುತ್ತಿಲ್ಲ. ಇದು ಸಾರ್ವಜನಿಕರಿಗೆ, ವರ್ತಕರಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡುತ್ತಿದೆ. ಹೀಗಾಗಿ ನಗರದಲ್ಲಿ ಬೀದಿ ದೀಪಗಳು ಬೆಳಗುವಂತೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಡಿಜಿತ್ , ಸ್ಥಳೀಯ ನಿವಾಸಿ
ಹಲವು ಬಾರಿ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಕೂಡ ಹೆಚ್ಚಿದೆ. ಮುಂದೆ ಯಾವುದಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಸ್ಥಳೀಯ ಆಡಳಿತವೇ ನೇರ ಹೊಣೆ. ನಗರದಲ್ಲಿ ಸಿಸಿ ಕ್ಯಾಮರಾಗಳಿವೆ ಅದು ಯಾವ ರೀತಿ ಕೆಲಸ ಮಾಡುತ್ತಿದೆ ಗೊತ್ತಿಲ್ಲ. ಜತೆಗೆ ಬೀದಿ ದೀಪಗಳು ಉರಿಯುತ್ತಿಲ್ಲ. ಹೀಗಾದ್ರೆ ನಾವು ಸಮಸ್ಯೆಯಾದಾಗ ಯಾರ ಬಳಿ ಹೇಳಿಕೊಳ್ಳುವುದು ಗೊತ್ತಿಲ್ಲ. ದಯವಿಟ್ಟು ಸ್ಥಳೀಯ ಶಾಸಕರು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಿ.ರಫೀಕ್, ವರ್ತಕ ಸಿದ್ದಾಪುರ
ಪಟ್ಟಣದಲ್ಲಿ ರಾತ್ರಿ ವೇಳೆ ಬೀದಿ ದೀಪಗಳು ಉರಿಯುತ್ತಿಲ್ಲ ಎಂಬುವುದು ನನ್ನ ಗಮನಕ್ಕೆ ಬಂದಿದೆ. ಹಲವು ಕಡೆ ಬಲ್ಬ್ ಕೆಟ್ಟು ಹೋಗಿದ್ದು ಅವುಗಳನ್ನು ಬದಲಾಯಿಸಲು ಈಗಾಗಲೇ ಸೂಚಿಸಲಾಗಿದೆ. ಮಳೆ ಹೆಚ್ಚಾಗಿರುವ ಹಿನ್ನೆಲೆ ತಡವಾಗುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲಾಗುವುದು.ಪ್ರೇಮ ಗೋಪಾಲ್, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ