ರಂಗಭೂಮಿ ಉಡುಪಿ ಆಶ್ರಯದಲ್ಲಿ ಕಿನ್ನರ ಮೇಳ ತುಮರಿ ಪ್ರಸ್ತುತಿಯಲ್ಲಿ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ನಡೆದ ಡಾ.ಚಂದ್ರಶೇಖರ ಕಂಬಾರ ರಚಿಸಿದ ಮೂರು ಕಥೆಗಳನ್ನು ಆಧಾರಿಸಿದ ‘ಮರವೇ ಮರ‍್ಮರವೇ..!’ಬೀದಿ ನಾಟಕದ ಪ್ರಥಮ ಪ್ರದರ್ಶನ ಸಂಪನ್ನಗೊಂಡಿತು.

ರಂಗಭೂಮಿ ಉಡುಪಿ ಆಶ್ರಯದಲ್ಲಿ ‘ಮರವೇ ಮರ‍್ಮರವೇ...’ ಬೀದಿನಾಟಕ ಪ್ರದರ್ಶನ

ಉಡುಪಿ: ನಮ್ಮ ಸಮಾಜ, ಜನ ಸಾಮಾನ್ಯರು ಬದುಕಿನಲ್ಲಿ ಎದುರಿಸುತ್ತಿರುವ ಬವಣೆಗಳು, ಸಾಮಾಜಿಕ ಸಂಘರ್ಷಗಳ ಬಗ್ಗೆ ಬೀದಿ ನಾಟಕಗಳು ಬೆಳಕು ಚೆಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯ ಮಾಡುತ್ತಿವೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಶ್ಲಾಘಿಸಿದ್ದಾರೆ.ಭಾನುವಾರ ರಂಗಭೂಮಿ ಉಡುಪಿ ಆಶ್ರಯದಲ್ಲಿ ಕಿನ್ನರ ಮೇಳ ತುಮರಿ ಪ್ರಸ್ತುತಿಯಲ್ಲಿ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ನಡೆದ ಡಾ.ಚಂದ್ರಶೇಖರ ಕಂಬಾರ ರಚಿಸಿದ ಮೂರು ಕಥೆಗಳನ್ನು ಆಧಾರಿಸಿದ ‘ಮರವೇ ಮರ‍್ಮರವೇ..!’ಬೀದಿ ನಾಟಕದ ಪ್ರಥಮ ಪ್ರದರ್ಶನ ಹಾಗೂ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಾಡು ಬೆಳೆದಂತೆ ಕಾಡು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ನಮ್ಮನಮ್ಮ ಮನೆ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವ ಪ್ರವೃತ್ತಿ ನಾವು ಬೆಳೆಸಿಕೊಳ್ಳಬೇಕು. ಮನೆಮುಂದಿನ ತುಳಸಿ ಗಿಡದಿಂದ ಹಿಡಿದು ನಿತ್ಯೋಪಯೋಗಿ ಗಿಡಗಳನ್ನು ಬೆಳೆಸಿ ಅವುಗಳನ್ನು ನಮ್ಮ ಜೀವನದ ಅಂಗವಾಗಿ ಮಾಡಿಕೊಂಡರೆ ನಮ್ಮ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ ಎಂದರು.ಕಾರ್ಯಕ್ರಮವನ್ನು ಉದ್ಯಮಿ ರಂಜನ್ ಕಲ್ಕೂರ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ರಂಗಭೂಮಿ ಉಡುಪಿ ಇದರ ಉಪಾಧ್ಯಕ್ಷರಾದ ರಾಜಗೋಪಾಲ ಬಲ್ಲಾಳ್ ಮತ್ತು ಬಾಸ್ಕರ ರಾವ್ ಕಿದಿಯೂರು, ಉದ್ಯಮಿ ರವೀಂದ್ರ ಶೆಟ್ಟಿ ಮತ್ತಿತರರಿದ್ದರು.

ರಂಗಭೂಮಿ ಪದಾಧಿಕಾರಿಗಳಾದ ಜಿ. ಪಿ. ಪ್ರಭಾಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಿವೇಕಾನಂದ ಎನ್. ನಿರೂಪಿಸಿದರು. ನಾಟಕಕ್ಕೆ ಕೆ.ಜಿ.ಕೃಷ್ಣಮೂರ್ತಿ, ಸಜಿ ಆರ್.ತುಮರಿ ಹಾಗೂ ಅರುಣ ಎನ್. ನಿರ್ದೇಶನವಿದೆ. ಸಂಗೀತ ದಿಗ್ವಿಜಯ ಹೆಗ್ಗೋಡು ಹಾಗೂ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಕೆ.ಜಿ.ಕೃಷ್ಣಮೂರ್ತಿ ಅವರೇ ನೀಡಿದ್ದಾರೆ.