ಕುಡಿಯುವ ನೀರಿಗಾಗಿ ನಾಗರೀಕರಿಂದ ಬೀದಿ ಬೀದಿ ಅಲೆದಾಟ

| Published : Jan 06 2025, 01:00 AM IST

ಕುಡಿಯುವ ನೀರಿಗಾಗಿ ನಾಗರೀಕರಿಂದ ಬೀದಿ ಬೀದಿ ಅಲೆದಾಟ
Share this Article
  • FB
  • TW
  • Linkdin
  • Email

ಸಾರಾಂಶ

ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯಿಂದ ಸರಬರಾಜು ಮಾಡುವ ನೀರನ್ನು ಸ್ಥಗಿತಗೊಳಿಸಿದ್ದು ಇದರಿಂದ ನಗರದಲ್ಲಿ ಬೇಸಿಗೆ ಮುನ್ನವೇ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದ್ದು ನೀರಿಗಾಗಿ ಮಹಿಳೆಯರು, ಮಕ್ಕಳು ಇಡೀ ದಿನವನ್ನೇ ವ್ಯಯಿಸಬೇಕಾದ ಸ್ಥಿತಿ ಉಂಟಾಗಿದೆ

ಕನ್ನಡಪ್ರಭ ವಾರ್ತೆ ತಿಪಟೂರು

ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯಿಂದ ಸರಬರಾಜು ಮಾಡುವ ನೀರನ್ನು ಸ್ಥಗಿತಗೊಳಿಸಿದ್ದು ಇದರಿಂದ ನಗರದಲ್ಲಿ ಬೇಸಿಗೆ ಮುನ್ನವೇ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದ್ದು ನೀರಿಗಾಗಿ ಮಹಿಳೆಯರು, ಮಕ್ಕಳು ಇಡೀ ದಿನವನ್ನೇ ವ್ಯಯಿಸಬೇಕಾದ ಸ್ಥಿತಿ ಉಂಟಾಗಿದ್ದು ನಗರಾಡಳಿತ ಕೂಡಲೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ನಗರದ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಕ್ಕೆ ನೀರು ಸರಬರಾಜು ಮಾಡುವ ಈಚನೂರು ಕೆರೆಗೆ ಯುಜಿಡಿ ನೀರು ಮಿಶ್ರಣವಾಗುತ್ತಿದ್ದರೂ ಅದೇ ನೀರನ್ನು ಬಿಡಲಾಗುತ್ತಿತ್ತು. ಆದರೆ ಕಳೆದ ೧೫ ದಿನಗಳಿಂದ ನೀರನ್ನು ಸ್ಥಗಿತಗೊಳಿಸುವ ಕಾರಣ ನೀರಿಗಾಗಿ ಅಲೆಯುವಂತಾಗಿದೆ. ನಗರಸಭೆ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತಾಗಿದೆ. ಬಿಂದಿಗೆ ಲೆಕ್ಕದಲ್ಲಿ ಅವರು ಕೊಡುವ ನೀರು ಯಾವುದಕ್ಕೂ ಸಾಕಾಗುತ್ತಿಲ್ಲ. ಒಂದು ರಸ್ತೆಗೆ ಬಂದರೆ ಮತ್ತೊಂದು ರಸ್ತೆಗೆ ನೀರಿನ ಟ್ಯಾಂಕರ್ ಬರುತ್ತಿಲ್ಲ. ಇದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆಯೇ ವಿನಹ ಕಡಿಮೆಯಾಗುತ್ತಿಲ್ಲ. ನಗರದ ಕೆ.ಆರ್.ಬಡಾವಣೆ, ಶಾರದಾನಗರ, ವಿದ್ಯಾನಗರ, ಗೋವಿನಪುರ, ಕಂಚಾಘಟ್ಟ, ಗಾಂಧಿನಗರ ಸೇರಿದಂತೆ ೩೧ವಾರ್ಡ್‌ಗಳಲ್ಲೂ ನೀರಿಗೆ ಹಾಹಾಕಾರ ಉಂಟಾಗಿದ್ದು, ನಗರಸಭೆ ಕೂಡಲೆ ಟ್ಯಾಂಕರ್ ಮೂಲಕ ಹೆಚ್ಚು ನೀರು ಸರಬರಾಜು ಮಾಡುವಂತೆ ನಗರವಾಸಿಗಳ ಒತ್ತಾಯವಾಗಿದೆ. ಅಲ್ಲಿಲ್ಲಿ ಇರುವ ಬೋರ್‌ವೆಲ್‌ಗಳಿಂದ ಬೀದಿ ನಲ್ಲಿಗಳ ಮೂಲಕ ನೀರು ಹರಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಗರೀಕರು ನೀರಿಲ್ಲದೆ ತೊಂದರೆಗೆ ಸಿಲುಕಿದ್ದು ಬಹುತೇಕರು ಹೆಚ್ಚಿನ ಹಣ ನೀಡಿ ಟ್ಯಾಂಕರ್‌ಗಳಿಂದ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಕೋಟ್ಯಾಂತರ ರೂ ವೆಚ್ಚದ ೨೪/೭ ನೀರಿನ ವ್ಯವಸ್ಥೆ ಜಾರಿಗೆ ಬಂದು ಹಲವಾರು ವರ್ಷಗಳಾದರೂ ನೀರಿಗೆ ಹಾಹಾಕಾರ ತಪ್ಪಿಲ್ಲ. ಉಳ್ಳವರು ಹಣ ಕೊಟ್ಟು ನೀರು ಹಾಕಿಸಿಕೊಳ್ಳುತ್ತಾರೆ. ಆದರೆ ಕೂಲಿ ಮಾಡಿ ಜೀವನ ನಡೆಸುವ ಜನರು, ಮಧ್ಯಮ ವರ್ಗದವರು ನೀರಿಗಾಗಿ ಪರದಾಡುವಂತಾಗಿದೆ. ಕೆಲ ಬಡಾವಣೆಗಳಲ್ಲಿ ಬೋರ್‌ವೆಲ್‌ಗಳೇ ಇಲ್ಲವಾಗಿದ ನೀರಿಗಾಗಿ ಬೀದಿ ಬೀದಿ ಅಲೆಯುವಂತಾಗಿದೆ. ನೀರು ಬಿಡದಿದ್ದರೂ ಅನಾವಶ್ಯಕವಾಗಿ ನೀರಿಗೆ ತೆರಿಗೆ ಕಟ್ಟಬೇಕಾದ ಹೊರೆ ಹೊರಿಸುವ ಕೆಲಸವನ್ನ ಇಲ್ಲಿನ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಮಾಡುತ್ತಿರುವುದಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಾಲೂಕು ಆಡಳಿತ ಹಾಗೂ ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರೀಕರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು ಟ್ಯಾಂಕರ್‌ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇತ್ತ ಟ್ಯಾಂಕರ್‌ನವರು ಮನಸೋ ಇಚ್ಚೆ ಹಣ ಕೇಳುತ್ತಿದ್ದು, ನೀರಿಗೆ ತೆರಿಗೆ ಕಟ್ಟಿಯೂ ಮತ್ತಷ್ಟು ಹೊರೆ ಹೊರಿಸುವ ಕೆಲಸವನ್ನ ನಗರಸಭೆ ಅಧಿಕಾರಿಗಳು ಮಾಡುತ್ತಿದ್ದು ಶೀಘ್ರ ನಗರದ ಜನತೆಗೆ ನೀರು ನೀಡುವ ಕೆಲಸ ಮಾಡಬೇಕೆಂದು ಸಾರ್ವಜನಿಕರು ಹಾಗೂ ಕೆಲ ನಗರಸಭಾ ಸದಸ್ಯರುಗಳು ಒತ್ತಾಯಿಸಿದ್ದಾರೆ. ಕೋಟ್ ೧ : ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು ಇದನ್ನು ಬಗೆಹರಿಸುವಲ್ಲಿ ನಗರಸಭೆ ವಿಫಲವಾಗಿದೆ. ಜನರು ಕೇಳಿದಷ್ಟು ಹಣ ನೀಡಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಈಚನೂರು ಕೆರೆಗೆ ಯುಜಿಡಿ ಕೊಳಚೆ ನೀರು ಮಿಶ್ರಿತವಾಗಿದ್ದು ನಗರಸಭೆ ಅಧಿಕಾರಿಗಳು ಈ ಬಗ್ಗೆಯೂ ಕಳೆದ ೬ ತಿಂಗಳಿನಿಂದಲೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈಗ ನಗರದಲ್ಲಿ ನೀರಿಗೆ ಪರಿತಪಿಸುವಂತಾಗಿದ್ದು ನಗರಸಭೆ ಮಾತ್ರ ಉತ್ತಮ ಬದಲಿ ವ್ಯವಸ್ಥೆ ಮಾಡಿಲ್ಲ. ನಗರದಾದ್ಯಂತ ಖಾಸಗಿ ಟ್ಯಾಂಕರ್‌ಗಳ ಹಾವಳಿ ಹೆಚ್ಚಾಗಿದ್ದು ಜನರಿಂದ ಹೆಚ್ಚು ಹಣ ಪೀಕುತ್ತಿದ್ದಾರೆ. - ರೇಖಾ ಅನೂಪ್‌, ನಗರಸಭಾ ಮಾಜಿ ಸದಸ್ಯರು, ತಿಪಟೂರು. ಕೋಟ್ 2 : ಕಾರಣಾಂತರಗಳಿಂದ ಈಚನೂರು ಕೆರೆಯಿಂದ ನಗರಕ್ಕೆ ನೀರು ಹರಿಸಲಾಗುತ್ತಿಲ್ಲ. ಹಾಗಾಗಿ ನಗರದ ಜನತೆಗೆ ನೀರು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. - ವಿಶ್ವೇಶ್ವರ ಬದರಗಡೆ, ಪೌರಾಯುಕ್ತರು, ನಗರಸಭೆ, ತಿಪಟೂರು.

ಕೋಟ್ 3 : ನಗರದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸದ್ಯದಲ್ಲಿಯೇ ಉಂಟಾಗಿರುವ ನೀರಿನ ತೊಂದರೆಯನ್ನು ಬಗೆಹರಿಸಲಾಗುತ್ತದೆ. - ಕೆ. ಷಡಕ್ಷರಿ, ಶಾಸಕರು, ತಿಪಟೂರು.