ಬೀದಿಬದಿ ವ್ಯಾಪಾರಿಗಳು ಯಾರಿಗೂ ಸುಂಕವನ್ನು ಕಟ್ಟುವಂತಿಲ್ಲ

| Published : Mar 26 2025, 01:37 AM IST

ಬೀದಿಬದಿ ವ್ಯಾಪಾರಿಗಳು ಯಾರಿಗೂ ಸುಂಕವನ್ನು ಕಟ್ಟುವಂತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿನ ಬೀದಿಬದಿ ವ್ಯಾಪಾರಿಗಳು ಏ.೧ರಿಂದ ಯಾರಿಗೂ ಸುಂಕವನ್ನು ಕಟ್ಟುವಂತಿಲ್ಲ ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾ ಮಹೇಶ್ ಹೇಳಿದರು.

ಕನ್ನಡಪ್ರಭವಾರ್ತೆ ವಿಜಯಪುರ

ಪಟ್ಟಣದಲ್ಲಿನ ಬೀದಿಬದಿ ವ್ಯಾಪಾರಿಗಳು ಏ.೧ರಿಂದ ಯಾರಿಗೂ ಸುಂಕವನ್ನು ಕಟ್ಟುವಂತಿಲ್ಲ ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾ ಮಹೇಶ್ ಹೇಳಿದರು.

ಪಟ್ಟಣದ ಪುರಸಭೆಯ ಆವರಣದಲ್ಲಿ ಆಯೋಜಿಸಿದ್ದ ಪುರಸಭೆಯ ಮಾಲೀಕತ್ವದ ಬಸ್ ಸ್ಟ್ಯಾಂಡ್ ಶುಲ್ಕ ವಸೂಲಿ, ವಾರದ ಸಂತೆ ಶುಲ್ಕ ವಸೂಲಿ, ಮರಳು, ಎಂ.ಸ್ಯಾಂಡ್, ಕಲ್ಲು ಮಾರಾಟ ಮಾಡುವ ವಾಹನಗಳ ಶುಲ್ಕ ವಸೂಲಾತಿ ಹರಾಜು ಪ್ರಕ್ರಿಯೆಯಲ್ಲಿ ಮಾತನಾಡಿ, ದಿನವಹಿ ಮಾರುಕಟ್ಟೆ ಶುಲ್ಕ ವಸೂಲಿ ಹರಾಜು ಕೈ ಬಿಟ್ಟಿದ್ದು, ಬೀದಿಬದಿ ವ್ಯಾಪಾರಿಗಳು ಯಾರೂ ಸುಂಕ ಕಟ್ಟದಂತೆ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮಾತನಾಡಿ. ಈ ಹಿಂದೆ ಪುರಸಭೆ ಆವರಣದಲ್ಲಿ ದಿನವಹಿ ಸುಂಕ ವಸೂಲಾತಿ ಹರಾಜನ್ನು ಈ ಬಾರಿ ನಿಲ್ಲಿಸಲಾಗಿದೆ. ನಾವು ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಸುಂಕ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಪ್ರಸ್ತುತ ಹರಾಜಾಗಿರುವ ಬಸ್ ಸ್ಟ್ಯಾಂಡ್. ವಾರದ ಸಂತೆ, ಎಂ.ಸ್ಯಾಂಡ್ ಕಲ್ಲು ಮಾರಾಟ ಮಾಡುವ ವಾಹನಗಳ ಸುಂಕವನ್ನು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿಗೆ ಪಡೆಯಬಾರದು. ಪಡೆದರೆ ಹರಾಜು ಗುತ್ತಿಗೆಯನ್ನು ರದ್ದುಪಡಿಸಿ, ಹರಾಜು ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಾರ್ವಜನಿಕರೂ ನಿಗದಿತ ದರಕ್ಕಿಂತ ಹೆಚ್ಚು ನೀಡಬಾರದು ಎಂದರು.

ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾ ಮೆಹಬೂಬ್ ಪಾಷ, ಸದಸ್ಯರಾದ ಎಂ.ರಾಜಣ್ಣ, ಹನೀಪುಲ್ಲಾ, ಶಿಲ್ಪಾಅಜಿತ್, ಸಿ.ನಾರಾಯಣಸ್ವಾಮಿ, ವಿ.ನಂದಕುಮಾರ್, ಎಂ.ನಾರಾಯಣಸ್ವಾಮಿ, ಶ್ರೀರಾಮಪ್ಪ, ಸೈಯದ್ ಎಕಲ್, ಕಂದಾಯ ಅಧಿಕಾರಿ ಚಂದ್ರು, ಸಿಬ್ಬಂದಿ ಅನಿಲ್, ಜನಾರ್ದನ, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.