ಸಾರಾಂಶ
ಪಿವಿಎಸ್ ಜಂಕ್ಷನ್‌ನಿಂದ ಲಾಲ್‌ಬಾಗ್‌ನ ಪಾಲಿಕೆ ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಸಿ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ನಡೆಸುವವರ ಮೇಲೆ ಮಹಾನಗರ ಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ವಿರೋಧಿಸಿ ಬುಧವಾರ ಬೀದಿ ಬದಿ ವ್ಯಾಪಾರಿಗಳು ಬೀದಿಗಿಳಿದು ಹೋರಾಟ ನಡೆಸಿದರು.ನಗರದ ಪಿವಿಎಸ್ ಜಂಕ್ಷನ್‌ನಿಂದ ಲಾಲ್‌ಬಾಗ್‌ನ ಪಾಲಿಕೆ ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಸಿ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೀದಿಬದಿ ವ್ಯಾಪಾರಸ್ಥರಿಗೆ ಸಂಘಟನೆಗಳ ಪ್ರಮುಖರು ಮೆರವಣಿಗೆ ಹಾಗೂ ಪ್ರತಿಭಟನೆಗೆ ಸಾಥ್ ನೀಡಿದರು. ಪಾಲಿಕೆ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿದ್ದ ಪೋಲಿಸರು ಬ್ಯಾರಿಕೇಡ್ ಅಳವಡಿಸಿ ಹೋರಾಟಗಾರರಿಂದ ಪಾಲಿಕೆಗೆ ಮುತ್ತಿಗೆ ಯತ್ನ ತಡೆದರು.ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ. ಕೆ. ಇಮ್ತಿಯಾಜ್, ನಗರದಲ್ಲಿ 8,500 ಮಂದಿಗೆ ಸ್ವನಿಧಿ ಸಾಲ ಕೊಡಲಾಗಿದೆ. ಆದರೆ 667 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯವಾಗಿಲ್ಲ. ನೀವು ಹಾಕಿರುವ ಷರತ್ತು ಬೀದಿ ಬದಿ ವ್ಯಾಪಾರಿಗಳ ಕಾನೂನಿನಲ್ಲಿ ಇಲ್ಲ. ಬಿಜೆಪಿ ಅಂದರೆ ಬುಲ್ಡೋಜರ್ ಎನ್ನುವುದನ್ನು ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಆರೋಪಿಸಿದರು.ರೈತ ಮುಖಂಡ ಯಾದವ ಶೆಟ್ಟಿ ಪ್ರತಿಭಟನೆ ಉದ್ಘಾಟಿಸಿದರು. ಸಮಾನ ಮನಸ್ಕ ಸಂಘಟನೆಯ ಪ್ರಮುಖರಾದ ಮಂಜುಳಾ ನಾಯಕ್, ಪ್ರಮುಖರಾದ ಬಿ.ಶೇಖರ್, ಸಂತೋಷ್ ಬಜಾಲ್, ಜಯಂತಿ ಶೆಟ್ಟಿ, ಬಿ.ಎಂ.ಭಟ್, ಮನೋಜ್ ವಾಮಂಜೂರು ಮತ್ತಿತರರು ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷ ಮುಹಮ್ಮದ್ ಮುಸ್ತಾಫ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸುನಿಲ್ ಕುಮಾರ್ ಬಜಾಲ್ ನಿರ್ವಹಿಸಿದರು.ಅಕ್ರಮ ಗೂಡಂಗಡಿಗಳ ವಿರುದ್ಧ ಮಾತ್ರ ಕಾರ್ಯಾಚರಣೆ ಭರವಸೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಆನಂದ್, ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾಯಂ ಗೂಡಂಗಡಿ ಇರಿಸಿರುವವರ ವಿರುದ್ಧ ಟೈಗರ್ ಕಾರ್ಯಾಚರಣೆ ನಡೆಸಲಾಗುವುದು. ಬೀದಿಬದಿ ವ್ಯಾಪಾರಸ್ಥರಿಗೆ ವಲಯ ಗುರುತಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಸಂಜೆ ವೇಳೆ ಬೀದಿಬದಿ ಆಹಾರ ಮಾರಾಟಗಾರರು ಗುಣಮಟ್ಟ ಕಾಯ್ದುಕೊಂಡು ವ್ಯಾಪಾರ ಮಾಡುವುದಕ್ಕೆ ತೊಂದರೆ ನೀಡುವುದಿಲ್ಲ ಎಂದರು.ಆ.8ರಂದು ಮೈಸೂರಿನಿಂದ ಅಧಿಕಾರಿಗಳು ಆಗಮಿಸಿ ಅಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ ವಲಯ ನಿರ್ಮಿಸಿರುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮುಂದಿನ 15 ದಿನದಲ್ಲಿ ಮೇಲ್ಮನವಿ ಪ್ರಾಧಿಕಾರ ರಚನೆ ಬಗ್ಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ತಪ್ಪಿದರೆ ಪಾಲಿಕೆ ಕಚೇರಿಗೆ ನುಗ್ಗಿ ಹೋರಾಟ ನಡೆಸುವುದಾಗಿ ಮುಖಂಡ ಬಿ.ಕೆ.ಇಮ್ತಿಯಾಜ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್‌ಡಿಟಿಯು ಭಾಗಿಗೆ ಆಕ್ಷೇಪಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪಕ್ಷದ ಕಾರ್ಮಿಕ ಸಂಘಟನೆ ಎಸ್‌ಡಿಟಿಯು(ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್) ಕಾರ್ಯಕರ್ತರು ತಮ್ಮ ಸಂಘಟನೆಯ ಬಾವುಟ ದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಪ್ರತಿಭಟನಾಕಾರರು ಆಕ್ಷೇಪಿಸಿದರು. ಸಮಾನ ಮನಸ್ಕ ಸಂಘಟನೆಗಳಲ್ಲಿ ಸಮಸ್ತ ಧರ್ಮಗಳ ಪರವಾದ ಬಾವುಟ ಇದೆ. ಯಾವುದೇ ಧರ್ಮದ ಬಾವುಟ ಪ್ರತಿಭಟನೆಯಲ್ಲಿ ಬೇಡ ಎಂದು ಪ್ರತಿಭಟನಾ ಸಂಘಟಕರು ವಿರೋಧಿಸಿದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಲ್ಲಿ ಸೇರಿದ್ದ ಎಸ್‌ಡಿಟಿಯು ಕಾರ್ಯಕರ್ತರನ್ನು ಹೊರ ಕಳಿಸಲಾಯಿತು.