ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಪ್ರತಿಭೆಯಿದೆ. ಮಕ್ಕಳ ಸುಪ್ತ ಪ್ರತಿಭೆ ವಿಕಾಸಗೊಳ್ಳಲು ಅಗತ್ಯ ವೇದಿಕೆಗಳನ್ನು ಶಾಲೆಗಳು ಒದಗಿಸಬೇಕು. ಕಲಿಕೆಯೊಂದೇ ಶಿಕ್ಷಣದ ಗುರಿಯಲ್ಲ. ಮಕ್ಕಳು ಸಾಂಸ್ಕೃತಿಕ ಮತ್ತು ಕ್ರೀಡಾಪಟುಗಳಾಗಿ ಹೊರಹೊಮ್ಮಿದಾಗ ನಾವು ನಮ್ಮ ಮಕ್ಕಳಿಗೆ ನಿಜವಾದ ಶಿಕ್ಷಣ ನೀಡಿದಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಕ್ಕಳನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಗಟ್ಟಿಗೊಳಿಸುವ ಶಾಲೆಗಳೇ ನಿಜವಾಗಿಯೂ ಅತ್ಯುತ್ತಮ ಶಾಲೆಗಳು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಿಂದ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಚಿಣ್ಣರ ಜಾಣರ ಜಗುಲಿ ಎನ್ನುವ ಮಕ್ಕಳ ಹರಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಪ್ರತಿಭೆಯಿದೆ. ಮಕ್ಕಳ ಸುಪ್ತ ಪ್ರತಿಭೆ ವಿಕಾಸಗೊಳ್ಳಲು ಅಗತ್ಯ ವೇದಿಕೆಗಳನ್ನು ಶಾಲೆಗಳು ಒದಗಿಸಬೇಕು. ಕಲಿಕೆಯೊಂದೇ ಶಿಕ್ಷಣದ ಗುರಿಯಲ್ಲ. ಮಕ್ಕಳು ಸಾಂಸ್ಕೃತಿಕ ಮತ್ತು ಕ್ರೀಡಾಪಟುಗಳಾಗಿ ಹೊರಹೊಮ್ಮಿದಾಗ ನಾವು ನಮ್ಮ ಮಕ್ಕಳಿಗೆ ನಿಜವಾದ ಶಿಕ್ಷಣ ನೀಡಿದಂತಾಗುತ್ತದೆ ಎಂದರು.

ಹರಟೆ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಕ್ಕಳಲ್ಲಿ ವಿಚಾರಶೀಲತೆ ಬೆಳೆಯುವುದಲ್ಲದೆ ಮಕ್ಕಳನ್ನು ವೇದಿಕೆಗೆ ಸಜ್ಜುಗೊಳಿಸಿದ ಶಿಕ್ಷಕ ವರ್ಗವೂ ಬೌದ್ದಿಕವಾಗಿ ವಿಕಸನಗೊಳ್ಳುತ್ತದೆ. ಶಿಕ್ಷಕರು ಮತ್ತು ಮಕ್ಕಳನ್ನು ಗಟ್ಟಿಗೊಳಿಸುವ ಹರಟೆ ಕಾರ್ಯಕ್ರಮಗಳು ನಾಡಿನ ಎಲ್ಲಾ ಶಾಲಾ-ಕಾಲೇಜುಗಳಲ್ಲೂ ನಡೆಯುವಂತಾಗಬೇಕು. ಪೋಷಕರು, ಶಿಕ್ಷಕರು ಮತ್ತು ಸಮಾಜ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ಕೆಲಸ ಮಾಡುವಂತೆ ತಿಳಿಸಿದರು.

ಹರಟೆ ಸಾಹಿತಿ ನಾಗಶ್ರೀ ತ್ಯಾಗರಾಜು ಹರಟೆ ಮಕ್ಕಳ ವೈಚಾರಿಕ ಹರಟೆಗೆ ಚಾಲನೆ ನಿಡಿದರು. ಜೀವನದಲ್ಲಿ ಹಣ ಮುಖ್ಯವೋ, ಗುಣ ಮುಖ್ಯವೋ ಎನ್ನುವ ವಿಚಾರ ಕುರಿತು ಹರಟೆ ಗೋಷ್ಠಿ ನಡೆಯಿತು. ಜೀವನಕ್ಕೆ ಹಣ ಮುಖ್ಯ. ಆದರೆ, ನಮ್ಮ ಬದುಕಿನಲ್ಲಿ ಹಣ ಸಂಪಾದನೆಯೇ ಪ್ರಧಾನವಾಗಿರಬಾರದು. ಹಣವಂತರಲ್ಲಿ ವಿನಯವಂತಿಕೆಯ ಗುಣವಿದ್ದರೆ ಅವರು ಸಮಾಜಕ್ಕೆ ಉಪಯುಕ್ತರಾಗುತ್ತಾರೆ. ಹಣ ಮತ್ತು ಗುಣಗಳ ಸಮ್ಮಿಲನದ ಬದುಕು ನಮ್ಮದಾಗಿರಬೇಕೆಂದು ಅಭಿಪ್ರಾಯಪಟ್ಟರು.

ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೇವಲ ಅಂಕ ಗಳಿಕೆಯಷ್ಟೇ ಮುಖ್ಯವಲ್ಲ. ಸಂಸ್ಕಾರ ಮುಖ್ಯ. ಬಾಲಗಂಗಾಧರನಾಥ ಸ್ವಾಮೀಜಿಗಳು ಸಮಾಜಕ್ಕೆ ನೀಡಿದ ಶಿಕ್ಷಣ ಮತ್ತು ಸಂಸ್ಕಾರದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದಗಳಿಗೆ ಪೂಜೆ ಸಲ್ಲಿಸಿ, ಅವರ ಆಶೀರ್ವಾದ ಪಡೆದರು. ಮಕ್ಕಳ ಈ ಭಕ್ತಿಪೂರ್ವಕ ಸೇವೆ ಹಾಗೂ ಗೌರವವನ್ನು ಕಂಡು ಪೋಷಕರು ಭಾವುಕರಾದರು.

ಕಾರ್ಯಕ್ರಮದಲ್ಲಿ ವಕೀಲ ಚಟ್ಟಂಗೆರೆ ಬಿ.ನಾಗೇಶ್, ಕುರುಬಹಳ್ಳಿ ನಾಗೇಶ್, ಬಿಜಿಎಸ್ ಸಂಸ್ಥೆಯ ನಿರ್ದೇಶಕ ಎಸ್.ಸಿ.ವಿಜಯಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಮೊಸಳೆ ಕೊಪ್ಪಲು ದಿನೇಶ್ ಸೇರಿದಂತೆ ಸಂಸ್ತೆಯ ಶಿಕ್ಷಕ ವೃಂದ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.