ಮತದಾನದ ಮೂಲಕ ಪ್ರಜಾಪ್ರಭುತ್ವ ಬಲಪಡಿಸಿ: ಪಿ.ಎಸ್. ವಸ್ತ್ರದ್

| Published : Apr 13 2024, 01:05 AM IST

ಸಾರಾಂಶ

ಮತದಾನ ಒಂದು ಪವಿತ್ರ ಕಾರ್ಯವಾಗಿದ್ದು, ಅರ್ಹ ಮತದಾರರೆಲ್ಲರೂ ಏಪ್ರಿಲ್ 26ರಂದು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಮತದಾನ ಒಂದು ಪವಿತ್ರ ಕಾರ್ಯವಾಗಿದ್ದು, ಅರ್ಹ ಮತದಾರರೆಲ್ಲರೂ ಏಪ್ರಿಲ್ 26ರಂದು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ಕರೆ ನೀಡಿದರು. ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿಂದು ಜಿಲ್ಲಾಡಳಿತ, ಸ್ವೀಪ್ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೆಯುಡಬ್ಲ್ಯುಜೆ ತುಮಕೂರು ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಚುನಾವಣಾ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮತದಾನದ ದಿನ ಮತಗಟ್ಟೆಗೆ ಹೋಗುವ ಮುನ್ನ ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಚುನಾವಣಾ ಆಯೋಗ ಗುರುತಿಸಿರುವ ಗುರುತಿನ ಚೀಟಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದರು. ಏಪ್ರಿಲ್ 26ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲ ಆಗುವ ರೀತಿಯಲ್ಲಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು, ಸಕಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಚುನಾವಣಾ ಸಂಬಂಧಿತ ಯಾವುದೇ ದೂರನ್ನು ೧೯೫೦ಗೆ ಕರೆ ಮಾಡುವ ಮೂಲಕ ಸಲ್ಲಿಸಬಹುದು ಮತ್ತು ಸಮಸ್ಯೆ ನಿವಾರಿಸಿಕೊಳ್ಳಬಹುದು ಎಂದು ತಿಳಿಸಿದರು. ತುಮಕೂರು ಜಿಲ್ಲೆಯಲ್ಲಿ ಕಳೆದ ಬಾರಿ ಶೇ.79ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.85 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ರೀತಿಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಕೋರಿದರು.ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತಿ ಮುಖ್ಯವಾಗಿದ್ದು, ಸದೃಢ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ಕರೆ ನೀಡಿದರು. ಜಿಲ್ಲೆಯ ಅಂದಾಜು ೨೨.೭೭ ಲಕ್ಷ ಮತದಾರರು ಮತ ಚಲಾಯಿಸಲು ಅನುವಾಗುವಂತೆ ೨೬೧೮ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ಮತದಾರ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಪಾಲಿಕೆ ಆಯುಕ್ತೆ ಅಶ್ವಿಜಾ ಅವರು ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಿಗೂ ಸಹ ಮತದಾನದ ಹಕ್ಕನ್ನು ನೀಡಲಾಗಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಬಂದು ಮತ ಚಲಾಯಿಸಬೇಕು. ಏಪ್ರಿಲ್ 26ರಂದು ಹಬ್ಬದ ರೀತಿಯಲ್ಲಿ ಮತದಾರರು ಮತದಾನ ಮಾಡಬೇಕು ಎಂದು ಕರೆ ನೀಡಿದರು. ನಮ್ಮ ಜಿಲ್ಲೆಯಲ್ಲಿ ಏಪ್ರಿಲ್ 21ರಂದು “ನಮ್ಮ ನಡೆ-ಮತಗಟ್ಟೆ ಕಡೆ” ಹಾಗೂ ಏಪ್ರಿಲ್ 24 ರಂದು “ನನ್ನ ಮತಗಟ್ಟೆ ಸುಂದರ ಮತಗಟ್ಟೆ”ಎನ್ನುವ ಮತಗಟ್ಟೆಗಳನ್ನು ಸೌಂದರ್ಯೀಕರಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ತುಮಕೂರು ಲೋಕಸಭಾ ಚುನಾವಣಾ-2024 ಲಾಂಛನ ‘ಕಲ್ಪ’ವನ್ನು ಬಿಡುಗಡೆ ಮಾಡಲಾಯಿತು. ನಂತರ ನಡೆದ ಕಾರ್ಯಾಗಾರದಲ್ಲಿ ನುರಿತ ಚುನಾವಣಾ ತರಬೇತುದಾರರಿಂದ ಎಂಸಿಎಂಸಿ ಸಮಿತಿ, ಪೇಯ್ಡ್ ನ್ಯೂಸ್, ಮಾದರಿ ನೀತಿ ಸಂಹಿತೆ ಕುರಿತಂತೆ ಪತ್ರಕರ್ತರಿಗೆ ಸಮಗ್ರವಾಗಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆಯುಡಬ್ಲೂಜೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಜಿಲ್ಲಾ ವಾರ್ತಾಧಿಕಾರಿ ಎಂ.ಆರ್.ಮಮತ, ಪತ್ರಕರ್ತರಾದ ರಘುರಾಮ್, ಕೃಷಿ ಇಲಾಖೆ ಉಪನಿರ್ದೇಶಕ ಅಶೋಕ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.