ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಿ: ಜಯಣ್ಣ

| Published : Feb 25 2025, 12:51 AM IST

ಸಾರಾಂಶ

ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಎಂ.ಜಯಣ್ಣ ಕರೆ ಚಾಲನೆ ನೀಡಿದರು.

ಹಿರಿಯೂರಿನಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕನ್ನಡಪ್ರಭ ವಾರ್ತೆ ಹಿರಿಯೂರು

ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಈಗಿನಿಂದಲೇ ತಯಾರಾಗಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಕರೆ ನೀಡಿದರು.

ನಗರದ ನೆಹರೂ ಮೈದಾನದಲ್ಲಿರುವ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಜಿಲ್ಲಾದ್ಯಂತ ಆಯಾಯ ತಾಲೂಕು ಕೇಂದ್ರಗಳಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಅದರಂತೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲೂ ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ ನೇತೃತ್ವದಲ್ಲಿ ಸೋಮವಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಹಿರಿಯೂರು ಕ್ಷೇತ್ರದಲ್ಲಿ ಸುಮಾರು 20 ಸಾವಿರ ಸದಸ್ಯತ್ವ ಅಭಿಯಾನದ ಗುರಿ ಹೊಂದಲಾಗಿದೆ ಎಂದರು.

ಪಕ್ಷ ಸಂಘಟನೆ ಹಾಗೂ ಬಲವರ್ಧನೆಯ ದೃಷ್ಟಿಯಿಂದ ಈ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಕಡೆ ಗಮನ ಹರಿಸಲಾಗುತ್ತಿದೆ ಎಂದರು.

ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಪಕ್ಷವನ್ನು ಬೂತ್ ಮಟ್ಟದಿಂದಲೇ ಸದೃಢಗೊಳಿಸುವ ಕೆಲಸ ಮಾಡಲಾಗುತ್ತದೆ. ಪ್ರತಿ ಗ್ರಾಪಂ ಗಳಿಗೆ ಮುಖಂಡರು ಭೇಟಿ ನೀಡಿ ಕಾರ್ಯಕರ್ತರನ್ನು ಸಂಘಟಿಸಲಾಗುವುದು. ತಳಮಟ್ಟದಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಮೂಲಕ ಬೂತ್ ಸಮಿತಿ ರಚಿಸಿ ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ, ಪಕ್ಷದ ಶಕ್ತಿಯನ್ನು ಹೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕು. ನಮ್ಮ ಪಕ್ಷವು ರೈತರ ಪರವಾಗಿ ಇರುವ ಪಕ್ಷವಾಗಿದ್ದು ನೀರಾವರಿ, ಕೃಷಿ, ಕೈಗಾರಿಕೆಗಳು ಹಾಗೂ ರೈತರ ಸಮಸ್ಯೆಗಳನ್ನು ನಿವಾರಿಸಲು ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕು. ಹಾಗಾಗಿ ಪಕ್ಷವನ್ನು ಬಲಪಡಿಸಲು ಸದಸ್ಯತ್ವ ಅಭಿಯಾನ ಮುಖ್ಯವಾಗಿದೆ ಎಂದರು.

ಜೆಡಿಎಸ್ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಎಂ ರವೀಂದ್ರಪ್ಪ ಮಾತನಾಡಿ, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬದಿಗಿಟ್ಟು ನಾವೆಲ್ಲರೂ ಒಂದಾಗಿ ಪಕ್ಷವನ್ನು ಗಟ್ಟಿಗೊಳಿಸುವ ಕಡೆ ಗಮನ ಹರಿಸೋಣ ಎಂದರು.

ಈ ವೇಳೆ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ, ಮುಖಂಡರಾದ ಕೂಡ್ಲಹಳ್ಳಿ ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಕೆ. ಶಂಕರಮೂರ್ತಿ, ಜಲ್ದಪ್ಪ, ಬಸವರಾಜ್, ಶಿವಣ್ಣ ಚಿಲ್ಲಹಳ್ಳಿ, ರಮೇಶ್ ಸೇರಿ ಜೆಡಿಎಸ್ ಪಕ್ಷದ ಹಲವು ಕಾರ್ಯಕರ್ತರು ಹಾಜರಿದ್ದರು.