ಅಭಿಯಾನವು ಗುಜರಾತ್ ರಾಜ್ಯದಿಂದ ಆರಂಭವಾಗಿದೆ.
ಸಂಡೂರು: ಕಾಂಗ್ರೆಸ್ ಪಕ್ಷವನ್ನು ಬೂತ್, ಮಂಡಲ್, ಬ್ಲಾಕ್ ಮಟ್ಟದಲ್ಲಿ ಬಲಪಡಿಸುವ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷದಿಂದ ದೇಶದಾದ್ಯಂತ ಸಂಘಟನ್ ಸೃಜನ್ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಪಕ್ಷದ ವೀಕ್ಷಕ ಅರುಣ್ ಯಾದವ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಸಂಘಟನ್ ಸೃಜನ್ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಭಿಯಾನವು ಗುಜರಾತ್ ರಾಜ್ಯದಿಂದ ಆರಂಭವಾಗಿದೆ. ಈ ಬಾರಿ ಪಕ್ಷದ ಬ್ಲಾಕ್, ಬೂತ್ ಮಟ್ಟದ ಕಾರ್ಯಕರ್ತರು, ಜನ ಸಾಮಾನ್ಯರು ಹಾಗೂ ಎನ್‌ಜಿಒಗಳೊಂದಿಗೆ ಚರ್ಚೆ ಮಾಡಿ, ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.
ಶಾಸಕಿ ಅನ್ನಪೂರ್ಣ ಈ ತುಕಾರಾಂ ಮಾತನಾಡಿ, ಗ್ರಾಮೀಣ ಜನರು ನೇರವಾಗಿ ಪಕ್ಷದ ಅಧ್ಯಕ್ಷರನ್ನು ಸಂಪರ್ಕಿಸುವ ರೀತಿಯಲ್ಲಿ ಪಕ್ಷವನ್ನು ಬಲಪಡಿಸಬೇಕಿದೆ. ಗ್ರಾಮೀಣ ಭಾಗದ ಜನರ ಧ್ವನಿ ಪಕ್ಷದ ಅಧ್ಯಕ್ಷರಿಗೆ ತಲುಪುತ್ತಿರಲಿಲ್ಲ. ಪ್ರತಿ ಕಾರ್ಯಕರ್ತರ ಧ್ವನಿಗೂ ಬೆಲೆ ಕೊಡುವ ಕೆಲಸವಾಗಬೇಕಿದೆ. ಪಕ್ಷದ ವೀಕ್ಷಕರು ಜನಾಭಿಪ್ರಾಯವನ್ನು ಸಂಗ್ರಹಿಸಿ, ಯಾರು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಂಡಿದ್ದಾರೋ ಅಂತಹವರಿಗೆ ಹೆಚ್ಚಿನ ಸ್ಥಾನಮಾನ ನೀಡುವರು.ಯುವ ಜನತೆ ಪಕ್ಷದಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಯುವಜನತೆಯನ್ನೂ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷವನ್ನು ಬಲಪಡಿಸಲು ಶ್ರಮಿಸೋಣ. ಅವರ ವಿಚಾರಧಾರೆಗೆ ಪುಷ್ಠಿ ನೀಡೋಣ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದವರ ಆಶಯದಂತೆ ಪಕ್ಷ ಹಾಗೂ ದೇಶ ಕಟ್ಟುವ ಕಾರ್ಯವನ್ನು ಕೈಗೊಳ್ಳೋಣ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಶೇ.೧೦೦ ಮುಕ್ತಾಯವಾಗಿದೆ. ತೋರಣಗಲ್ಲು ಭಾಗದಲ್ಲಿ ಮಾತ್ರ ವಲಸಿಗರಿಂದಾಗಿ ಸ್ವಲ್ಪ ತೊಂದರೆಯಾಗಿದೆ. ಅದನ್ನೂ ಸರಿಪಡಿಸಲಾಗುತ್ತಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಕಂದರ್, ಕೆಪಿಸಿಸಿ ವೀಕ್ಷಕಿ ಕಿಶೋರಿ ಬೂದನೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಕರ್ನಾಟಕ ರಾಜ್ಯ ಖನಿಜಗಳ ನಿಗಮದ ಉಪಾಧ್ಯಕ್ಷ ಲಕ್ಷ್ಮಣ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬರಪ್ಪ, ಯೂಥ್ ಕಾಂಗ್ರೆಸ್ ಮುಖಂಡ ಮಂಜುನಾಥ್ ಎನ್‌ಕೆಎಸ್ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.