ಸಾರಾಂಶ
ಅಂಕೋಲಾ:
ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನದ ಅರಿವು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಇಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ವ್ಯಾಪಕವಾಗಿ ಪ್ರಚಾರಪಡಿಸಿ ತಮ್ಮ ಹಕ್ಕು ಹಾಗೂ ಕರ್ತವ್ಯ ಪಾಲಿಸಬೇಕಾಗಿದೆ ಎಂದು ಉದ್ಯಮಿ ಮಂಜುನಾಥ ಎಲ್. ನಾಯ್ಕ ಅಭಿಪ್ರಾಯಪಟ್ಟರು.ಅವರು 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ರಾಷ್ಟ್ರೀಯ ಉತ್ಸವ ಸಮಿತಿ, ತಾಲೂಕಾಡಳಿತ, ಸಂಗಾತಿ ರಂಗಭೂಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಭಾರತ ಸೇವಾದಳ, ಕರ್ನಾಟಕ ಸಂಘ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನೃತ್ಯ ಹಾಗೂ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸದೆ ಇದ್ದರೆ ನಾವು ಯಾರು ಇಂದು ಇಷ್ಟು ಮುಕ್ತವಾಗಿ ಸ್ವಾತಂತ್ರ್ಯ ಅನುಭವ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಪ್ರೊ. ಮೋಹನ ಎಸ್. ಹಬ್ಬು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಪಾತ್ರ ದೊಡ್ಡದಾಗಿತ್ತು. ಸ್ವಾತಂತ್ರ್ಯ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಮಹತ್ವ ಪಡೆದುಕೊಂಡರು. ಸಂವಿಧಾನದ ಎಲ್ಲ ಆಶಯ ಈಡೇರಿಸಲು ಪ್ರಜೆಗಳಾದ ನಾವು ಸಂವಿಧಾನದ ತಿಳಿವಳಿಕೆ ಹೊಂದಿರಬೇಕಾಗಿರುತ್ತದೆ ಎಂದರು.ತಾಲೂಕು ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ, ಭಾರತ ಸೇವಾ ದಳದ ಅಧ್ಯಕ್ಷ ಜಿ.ಆರ್. ನಾಯಕ ವಂದಿಗೆ, ಸಂಗಮ ಸೇವಾ ಸಂಸ್ಥೆ ಅಧ್ಯಕ್ಷ ರವೀಂದ್ರ ಶೆಟ್ಟಿ, ನೃತ್ಯ ಕಲಾವಿದೆ ಪೂಜಾರಾಣಿ ಎಂ. ನಾಯ್ಕ, ಶಿಕ್ಷಕಿ ಪ್ರವೀಣಾ ದೊಡ್ಮನಿ, ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಗಾಂವಕರ, ಮಂಗಲಾ ಹರಿಕಂತ್ರ, ಕೆಎಲ್‌ಇ ಕೌಂಟುಬಿಕ ಸಲಹಾ ಕೇಂದ್ರದ ಸಲಹೆಗಾರರಾದ ತಿಮ್ಮಣ್ಣ ಭಟ್ಟ, ಎನ್‌ಸಿಸಿ ಕಮಾಂಡರ್ ಶಿಕ್ಷಕ ಜಿ.ಆರ್. ತಾಂಡೇಲ, ಭಾರತ ಸೇವಾದಳದ ಜಿ.ಆರ್. ಗಾಂವಕರ, ನಾಗರಾಜ ನಾಯ್ಕ ಪಳ್ಳಿಕೇರಿ, ಸುಬ್ರಾಯ ಗೌಡ, ಪೂಜಾರಾಣಿ ಎಂ. ನಾಯ್ಕ ಹಾಗೂ ಸ್ವಪ್ನಾ ಗಾಂವಕರ ಇದ್ದರು.ನೃತ್ಯ ಹಾಗೂ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ನೀಡಲಾಯಿತು. ಡಾ. ದಿನಕರ ದೇಸಾಯಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೈಹಿಂದ್ ಪ್ರೌಢಶಾಲೆ ಪ್ರಥಮ ಬಹುಮಾನ ಪಡೆದರು.
ಕಾರ್ಯಕ್ರಮದ ಸಂಘಟಕ ಕೆ. ರಮೇಶ ಸ್ವಾಗತಿಸಿದರು. ಪ್ರಜ್ಞಾ ಪಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.