ಸಾರಾಂಶ
ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಜೊತೆಗೆ ಪೌಷ್ಟಿಕ ಆಹಾರ, ಮೊಟ್ಟೆ ಹಾಗೂ ಬಿಸಿಯೂ, ಶೂ ಸಹ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಶಾಲೆಗಳನ್ನು ಉಳಿಸಲು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಸೌಕರ್ಯ ಒದಗಿಸುತ್ತಿದೆ. ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಜೊತೆಗೂಡಿ ಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ತಿಳಿಸಿದರು.ಕೆಂಪಯ್ಯನದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಜೊತೆಗೆ ಪೌಷ್ಟಿಕ ಆಹಾರ, ಮೊಟ್ಟೆ ಹಾಗೂ ಬಿಸಿಯೂ, ಶೂ ಸಹ ನೀಡಲಾಗುತ್ತಿದೆ ಎಂದರು.ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೆಂಪಯ್ಯನ ದೊಡ್ಡಿ ಗ್ರಾಮದ ಮುಖಂಡರು ಹಾಗೂ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಜೊತೆಗೂಡಿ ಮಕ್ಕಳ ಮನೆ ಮನೆಗೆ ತೆರಳಿ ಸರ್ಕಾರದಿಂದ ಸಿಗುವ ಸವಲತ್ತುಗಳ ಟಿಪ್ಪಣಿ ಪತ್ರವನ್ನು ವಿತರಿಸಿ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸುವಂತೆ ಮನವಿ ಮಾಡಿದರು.
ಮುಖ್ಯ ಶಿಕ್ಷಕ ಸುಂದರಪ್ಪ ಮಾತನಾಡಿದರು. ಎತ್ತಿನಗಾಡಿಯಲ್ಲಿ ಸರಸ್ವತಿ ದೇವರ ಭಾವಚಿತ್ರವನ್ನು ಇರಿಸಿ ಹೊಸದಾಗಿ ಶಾಲೆಗೆ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಗಾಡಿಯಲ್ಲಿ ಕೂರಿಸಿಕೊಂಡು ಪೂರ್ಣ ಕುಂಭ ಮತ್ತು ಪಟ್ಟೆ ಕುಣಿತ ದೊಡನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಗ್ರಾಮೀಣ ಪ್ರದೇಶದ ಜನಪದ ಸೊಗಡನ್ನು ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ರವಿಕುಮಾರ್, ಮೋಹನ್ ಕುಮಾರ್, ಮಾದೇಗೌಡ, ಲಕ್ಷ್ಮಣ, ವೀರಭದ್ರ ಶೆಟ್ಟಿ, ಚೌಡಶೆಟ್ಟಿ, ಶಿಕ್ಷಕಿಯರಾದ ನಳಿನ, ರಚನಾ ಹಾಜರಿದ್ದರು.
ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನಮಂಡ್ಯ:
ಪರಿಚಯ ಪ್ರಕಾಶನ ವತಿಯಿಂದ ನೀಡಲಾಗುವ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ 2024ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ಲೇಖಕ/ಲೇಖಕಿ ಅಥವಾ ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಮಕ್ಕಳ ಸಾಹಿತ್ಯದ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಹಾಗೂ ಸಂಶೋಧನಾ ಪ್ರಕಾರಗಳೂ ಸೇರಿದಂತೆ ಒಟ್ಟಾರೆ ಮಕ್ಕಳಿಗೆ ಸಂಬಂಧಪಟ್ಟ ಕೃತಿಗಳನ್ನು ಕಳುಹಿಸಬಹುದು. ಪ್ರಶಸ್ತಿಯು 10,000 ನಗದು ಮತ್ತು ಫಲಕವನ್ನು ಹೊಂದಿದೆ. ಆಸಕ್ತ ಸಾಹಿತಿಗಳು ತಮ್ಮ ಪುಸ್ತಕಗಳ ಮೂರು ಪ್ರತಿಗಳನ್ನು ಜೂ.30ರೊಳಗೆ ತಲುಪುವಂತೆ ಅಂಚೆ ಮೂಲಕ ಎಂ.ಎನ್.ಶಿವಕುಮಾರ್ ಆರಾಧ್ಯ, ಪರಿಚಯ ಪ್ರಕಾಶನ, ನಂ.181, ಮಂಗಲ ಗ್ರಾಮ ಮತ್ತು ಅಂಚೆ, ಮಂಡ್ಯ ತಾಲೂಕು, ಮಂಡ್ಯ ಜಿಲ್ಲೆ- 571478 ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಮೊ- 9916894417 ಸಂಪರ್ಕಿಸಬಹುದು.