ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಖಾಸಗಿ ಚಿಂತನೆಯಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಯಾಗುತ್ತಿದೆ ಎಂದು ಕುಷ್ಮಾದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ.ಆಳ್ವಾಸ್‌ನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ವತಿಯಿಂದ ಕುಷ್ಮಾ ಜಿಲ್ಲಾವಾರು ಸಮಿತಿಯ ಸಂಯೋಜಕರಿಗೆ ಆಯೋಜಿಸಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶೇ.50ರಷ್ಟು ಮಕ್ಕಳು ಖಾಸಗಿ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳಿಗೆ ಹೋಲಿಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಉತ್ತಮವಾಗಿದೆ. ಕಳೆದ ಬಾರಿಯ ಬೋರ್ಡ್ ಪರೀಕ್ಷೆಯಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು 75 ಶೇ. ಫಲಿತಾಂಶ ದಾಖಲಿಸಿದರೆ, ಅನುದಾನಿತ ಸಂಸ್ಥೆಗಳಲ್ಲಿ 79 ಶೇಕಡಾ ಫಲಿತಾಂಶ ಲಭಿಸಿದರೆ ಹಾಗೂ ಖಾಸಗಿ ಸಂಸ್ಥೆಗಳು 90.46 ಶೇಕಡಾ ಫಲಿತಾಂಶ ನೀಡಿವೆ. ಇವುಗಳ ಜೊತೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶದಲ್ಲೂ ಖಾಸಗಿ ಸಂಸ್ಥೆಗಳು ಅಗ್ರಗಣ್ಯ ಸ್ಥಾನದಲ್ಲಿ ನಿಂತಿವೆ ಎಂದರು.ಕುಪ್ಮಾದ ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್ ನಾಯಕ್ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕುಪ್ಮಾ ಸಂಘಟನೆಗೆ ರಾಜ್ಯ ಸಮಿತಿಯ ಸಂಪೂರ್ಣ ಸಹಕಾರವಿರಲಿದ್ದು, ಪ್ರತೀ ಜಿಲ್ಲೆಯಲ್ಲೂ ಕಮಿಟಿ ಸ್ಥಾಪನೆಯಾಗಲೂ ಎಲ್ಲರ ಸಹಕಾರ ಅಗತ್ಯ. ಕುಪ್ಮಾದ ಮೂಲಕ ಸದಸ್ಯ ಸಂಸ್ಥೆಗಳ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗೆ ನಾವು ಸದಾ ಬದ್ಧ ಎಂದರು.
ಕುಷ್ಮಾ ಉಪಾಧ್ಯಕ್ಷ ಪ್ರೊ. ಸುಧಾಕರ ಶೆಟ್ಟಿ ಕುಷ್ಮಾ ಜಿಲ್ಲಾವಾರು ಸಮಿತಿ ರಚನೆಯ ಬಗ್ಗೆ ಸಂವಾದ ನಡೆಸಿ ಕೊಟ್ಟರು. ಪ್ರತಿ ಜಿಲ್ಲೆಗಳಲ್ಲಿ ಕುಪ್ಮಾ ಕಾರ್ಯಕಾರಿ ಸಮಿತಿ ಸ್ಥಾಪನೆಯ ಜವಾಬ್ದಾರಿ ಹಂಚಲಾಯಿತು.ಕುಪ್ಮಾ ಜೊತೆ ಕಾರ್ಯದರ್ಶಿ ವಿಶ್ವನಾಥ ಶೇಷಾಚಲ ಕುಷ್ಮಾ ಜಿಲ್ಲಾ ಸಮಿತಿಯ ಸದಸ್ಯರೊಂದಿಗೆ ಪ್ರಶ್ನೋತ್ತರ ಮಾಲಿಕೆ ನಡೆಸಿಕೊಟ್ಟರು.
ಕುಪ್ಮಾದ ಮಾಹಿತಿಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಹೊರತರುವ ನಿರ್ಧಾರ ಕೈಗೊಳ್ಳಲಾಯಿತು. ನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕರ್ಯಕ್ರಮ ನಡೆಯಿತು.ಬೆಂಗಳೂರು ಉತ್ತರ ಕುಷ್ಮಾ ಕಾರ್ಯದರ್ಶಿ ಡಾ ಬಿ. ಕೆ. ದೇವರಾಜ್, ಬೆಂಗಳೂರು ದಕ್ಷಿಣ ಜಿಲ್ಲೆಯ ಕುಷ್ಮಾ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ, ಕುಪ್ಮಾ ಗೌರವಾಧ್ಯಕ್ಷ ರಾಧಕೃಷ್ಣ ಶೆಣೈ ಇದ್ದರು. ಕರುಣಾಕರ್ ಬಳ್ಕೂರು ನಿರ್ವಹಿಸಿದರು.